ವಿಜಯಸಾಕ್ಷಿ ಸುದ್ದಿ, ಗದಗ : `ಯೋಗ’ ಎಂಬ ಎರಡಕ್ಷರದ ಶಬ್ದ ಇಡೀ ಜಗತ್ತನ್ನೇ ಚಕಿತಗೊಳಿಸಿದೆ. ಭಾರತೀಯರಿಗೆ ಸೋಜಿಗ ಮತ್ತು ಅಭಿಮಾನದ ವಿಷಯವಾಗಿದೆ. ಕಾರಣ ವಿಶ್ವದಾದ್ಯಂತ ಯೋಗ ದಿನಾಚರಣೆ ಆಚರಿಸಿದಂತೆ ಉಳಿದ ಯಾವ ದಿನಾಚರಣೆಗಳನ್ನು ಆಚರಿಸುವದು ಬಹು ವಿರಳ. ಯೋಗ ದಿನಾಚರಣೆ ಬೌದ್ಧಿಕ ಹಾಗೂ ಪ್ರಾಯೋಗಿಕ ದಿನಾಚರಣೆಯಾಗಿದೆ. ಯೋಗ ಒಂದು ಆಧ್ಯಾತ್ಮ ವಿದ್ಯೆಯಾಗಿರದೆ ಸರ್ವ ಕ್ಷೇತ್ರಗಳಲ್ಲಿ ವಿಕಾಸ ಹೊಂದಲು ಸಹಕರಿಸುವ ಅತ್ಯದ್ಭುತ ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ವಿಜ್ಞಾನ ಏನೆಲ್ಲ ಆಗಿದೆ ಎಂದು ವೈದ್ಯ, ಸರಾಫ ವರ್ತಕ ಮತ್ತು ಸಾಹಿತಿ ಡಾ. ಕಲ್ಮೇಶ ಮೂರಶಿಳ್ಳಿನವರ ಅಭಿಪ್ರಾಯಪಟ್ಟರು.
10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಎಸ್.ವಾಯ್.ಬಿ.ಎಂ.ಎಸ್. ಯೋಗಪಾಠಶಾಲೆಯ ಬಸವ ಯೋಗ ಮಹಾವಿದ್ಯಾಲಯ, ಗದಗ ಜಿಲ್ಲಾ ಯೋಗ ಒಕ್ಕೂಟ ಹಾಗೂ ಗದಗ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಸಂಸ್ಥೆ ಗದಗ ಇವರುಗಳ ಸಹಯೋಗದಲ್ಲಿ ಸಿದ್ಧಲಿಂಗ ನಗರದಲ್ಲಿನ ಬಸವ ಯೋಗ ಮಂದಿರದಲ್ಲಿ ನಡೆದ `ಯೋಗೋತ್ಸವ’ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಯೋಗೋತ್ಸವ-24ರ ಅಡಿಯಲ್ಲಿ ಯೋಗ ಸೇವೆ ಸಲ್ಲಿಸಿದವರನ್ನು ಸನ್ಮಾನಿಸುವದು, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯಗಳಾಗಿವೆ. ಈ ಕಾರ್ಯಗಳ ಯಶಸ್ಸಿಗೆ ಯೋಗಾಚಾರ್ಯ ಕೆ.ಎಸ್. ಪಲ್ಲೇದರು ಪ್ರೇರಕರಾಗಿರುವದು ನಮಗೆಲ್ಲರಿಗೂ ಸಂತಸ ತಂದಿದೆ ಎಂದು ಹೇಳಿದರು.
ಗದಗ ಜಿಲ್ಲೇಯಾದ್ಯಂತ ಯೋಗದ ಮಹತ್ವ ತಿಳಿಸಿ, ಸ್ವಸ್ಥ ಸಮಾಜ ನಿರ್ಮಾಣ ಕಾರ್ಯದಲ್ಲಿ ಶ್ರಮಿಸುತ್ತಿರುವ ಡಾ. ಅಶೋಕ ಮತ್ತಿಗಟ್ಟಿ, ದಶರಥ, ಕೊಟೇಗೌಡ, ರವಿ ಉಮಚಗಿ, ಅಂಜನೇಶ ಮಾನೆ, ಪ್ರಕಾಶ ಮದ್ದಿನ, ಯಶವಂತ ಮತ್ತೂರ, ಮಂಜುಳಾ ಇಟಗಿ, ಸುನಂದಾ ಜ್ಯಾನೋಪಂತರ, ಸುಮಂಗಲಾ ಹದ್ಲಿ, ಸುಧಾ ಪಾಟೀಲ, ಮಂಗಳಾ ಸಜ್ಜನರ ಇವರನ್ನು ಗೌರವಾದರಗಳಿಂದ ಸನ್ಮಾನಿಸಿ, ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಡಾ. ಯು.ವಿ. ಪುರದ, ಡಾ. ಮೀನಾಕ್ಷಿ ಮತ್ತಿಗಟ್ಟಿ, ಸಂಗೀತ ನಾಕೋಡ ಇದ್ದರು. ಸಮಾರಂಭದಲ್ಲಿ ಡಾ. ಎಸ್.ಕೆ. ನಾಲತ್ವಾಡಮಠ, ಪ್ರೊ. ಅನ್ನದಾನಿ ಹಿರೇಮಠ, ವಿ.ಪಿ. ಸವಡಿ, ಎಸ್.ಬಿ. ಮೆಣಸಗಿ, ಎಚ್.ಟಿ. ಸಂಜೀವಸ್ವಾಮಿ, ಗೌರಿ ಜಿರಂಕಳಿ, ಲಲಿತಾ ಅಣ್ಣಿಗೇರಿ, ಶಶಿಕಲಾ ಬೆಲ್ಲದ, ಶಾಂತಾ ಕುಂದಗೋಳ, ಜಯಶ್ರೀ ಡಾವಣಗೇರಿ ಸೇರಿದಂತೆ ಯೋಗಾಸನ ಕ್ರೀಡಾಪಟುಗಳು, ಯೋಗಾಸಕ್ತ ಬಂಧುಗಳು ಉಪಸ್ಥಿತರಿದ್ದರು.
ಡಾ. ಎಂ.ವಿ. ಐಹೊಳ್ಳಿ ಸ್ವಾಗತ ಕೋರಿದರು. ಬಸವ ಯೋಗ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಎಸ್. ಪಲ್ಲೇದ ಪ್ರಾಸ್ತಾವಿಕ ನುಡಿ ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಆನಂದ ಬದಿ ವಂದಿಸಿದರು.
ಅಧ್ಯಕ್ಷತೆ ವಹಿಸಿದ ಖ್ಯಾತ ವಾಗ್ಮಿಗಳಾದ ಪ್ರಾ. ಕೆ.ಎಚ್. ಬೇಲೂರ ಮಾತನಾಡಿ, ಪ್ರಸ್ತುತ ದಿನಮಾನದಲ್ಲಿ ಕಲುಷಿತ ನೀರು, ಗಾಳಿ, ಆಹಾರ, ಪರಿಸರಗಳಿಂದ ಜನತೆಯ ಆರೋಗ್ಯ ಕ್ಷೀಣಿಸುತ್ತಿದೆ. ಯೋಗವು ಈ ಸಮಸ್ಯೆ ದೂರಗೊಳಿಸಲು ಮುಖ್ಯ ಪಾತ್ರ ವಹಿಸುತ್ತದೆ. ಅನೇಕ ರೋಗಗಳನ್ನು ನಿವಾರಿಸುತ್ತದೆ. ಯೋಗ ದಿನಾಚರಣೆಯಿಂದ ಜನತೆಯಲ್ಲಿ ಆರೋಗ್ಯದ ಅರಿವು ಮೂಡಿದೆ. ಯೋಗ ಪ್ರಸಾರಕ್ಕೆ ಸರಕಾರವೂ ಪ್ರೋತ್ಸಾಹಿಸಬೇಕೆಂದು ತಿಳಿಸಿದರು.



