ವಿಜಯಸಾಕ್ಷಿ ಸುದ್ದಿ, ಲಕ್ಷೇಶ್ವರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗಳಿಸುವ ಯಶಸ್ಸು ಮುಂದಿನ ಶೈಕ್ಷಣಿಕ ಜೀವನಕ್ಕೆ ಮಾರ್ಗದರ್ಶಿಯಾಗಲಿದೆ. ನಿಮ್ಮ ಉಜ್ವಲ ಭವಿಷ್ಯದ ರೂವಾರಿಗಳೂ ನೀವೇ ಆಗಿದ್ದು, ಅನಗತ್ಯ ಯೋಚನೆಗಳಿಂದ ಹೊರ ಬಂದು ಶೃದ್ಧೆಯಿಂದ ಮನಸ್ಸನ್ನು ಓದಿನತ್ತ ಕೇಂದ್ರೀಕರಿಸಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಅವರು ಸೋಮವಾರ ಪಟ್ಟಣದ ಸವಣೂರ ರಸ್ತೆಯ ಬಿಸಿಎನ್ ಪಿಯು ಮತ್ತು ಡಿಗ್ರಿ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭವಿಷ್ಯದ ಬಗ್ಗೆ ತಂದೆ-ತಾಯಿಗಳು ಬೆಟ್ಟದಷ್ಟು ಆಸೆ-ಕನಸು ಕಟ್ಟಿಕೊಂಡು ಹಗಲಿರುಳು ದುಡಿಯುತ್ತಾರೆ. ಅದನ್ನು ಅರ್ಥೈಸಿಕೊಂಡು ಹೆತ್ತವರ ಆಸೆ ತೀರಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಡಬೇಕು. ಪಾಠಾಭ್ಯಾಸ ಮುಗಿಸಿ ಪರೀಕ್ಷೆ ಓದಲು ರಜೆ ಕೊಡದೇ ಶಾಲೆಯಲ್ಲಿಯೇ ಓದುವ ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಪೂರಕ ವಾತಾವರಣ, ಮೇಲ್ವಿಚಾರಣೆ, ಮಾರ್ಗದರ್ಶನ ಮಾಡಬೇಕು. ಅವರ ಆಸೆ, ಕನಸಿಗೆ ನೀವು ಚಿಗುರಾಗಬೇಕು. ವಿದ್ಯಾರ್ಥಿಗಳು ಅತ್ಯಮೂಲ್ಯವಾದ ಸಮಯ ವ್ಯರ್ಥಮಾಡದೇ ಶಿಕ್ಷಕರ ಮಾರ್ಗದರ್ಶನದಲ್ಲಿ ಓದಬೇಕು. ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಗದಗ ಜಿಲ್ಲೆಯ ಸ್ಥಾನ 17ಕ್ಕಿದ್ದು, ಈ ವರ್ಷ ಒಂದAಕಿಯೊಳಗಾದರೂ ಬರಬೇಕು ಎಂದು ಆಶಿಸಿದರು.
ಬಿಸಿಎನ್ ಶಿಕ್ಷಣ ಸಂಸ್ಥೆ ನಿರ್ದೇಶಕ ಲೋಹಿತ ನೆಲವಿಗಿ ಸಾವಿರಾರು ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರಕ ಸ್ಪಡಿ ಮಟೀರಿಯಲ್ ಉಚಿತವಾಗಿ ವಿತರಿಸಿ ಮಾತನಾಡಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಕಾರ್ಯಾಗಾರಗಳು ಪೂರಕವಾಗಿವೆ. ಶಿಕ್ಷಕರು ಪಾಠ ಮಾಡುವುದು ಎಷ್ಟು ಮುಖ್ಯವೋ, ವಿದ್ಯಾರ್ಥಿಗಳು ನಿರಂತರ ಓದಿ ಸಾಧನೆ ಮಾಡುವುದೂ ಅಷ್ಟೇ ಮುಖ್ಯ. ವಿದ್ಯಾರ್ಥಿಗಳು ತಮ್ಮಲ್ಲಿನ ಕೀಳರಿಮೆ ಬಿಟ್ಟು, ಋಣಾತ್ಮಕವಾಗಿ ಯೋಚಿಸದೇ ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸದಿಂದ ಅಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು.
ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವವರೆಗೂ ಶೈಕ್ಷಣಿಕ ಸಾಧನಗೆ ಅಡ್ಡಿಯಾಗಲಿರುವ ಮೋಬೈಲ್, ಟಿವಿ ಬಳಸುವುದಿಲ್ಲ ಎಂಬ ದೃಢ ಸಂಕಲ್ಪ ವಿದ್ಯಾರ್ಥಿಗಳದ್ದಾಗಬೇಕು. ಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 98ರಷ್ಟು ಫಲಿತಾಂಶ ಗಳಿಸಿದ ವಿದ್ಯಾರ್ಥಿಗಳಿಗೆ ಬಿಸಿಎನ್ ವಿಜನ್ ಪಿಯೂ ಕಾಲೇಜಿನಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗುವುದು. ಪಿಯುಸಿಯಲ್ಲಿ ಶೇ.95 ಅಂಕಗಳಿಸುವ ವಿದ್ಯಾರ್ಥಿಗೆ ಬಿಸಿಎನ್ ವಿಜನ್ ಪದವಿ ಕಾಲೇಜನಲ್ಲಿ ಪ್ರವೇಶ ಮತ್ತು ಸ್ಕಾಲರ್‌ಶಿಪ್ ನೀಡಲಾಗುವುದು ಎಂದರು.
ಬಿಇಓ ನಾಣಕಿ ನಾಯ್ಕ ಮಾತನಾಡಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ ಶೈಕ್ಷಣಿಕ ವರ್ಷಾರಂಭದಿAದಲೇ ಅಧಿಕಾರಿಗಳು, ಶಿಕ್ಷಕರು ವಿದ್ಯಾರ್ಥಿಗಳಿಗಾಗಿ ಹಲವು ಪರಿಣಾಮಕಾರಿ ವಿಧಾನ, ವಿನೂತನ ಯೋಜನೆಗಳನ್ನು ಕೈಗೊಳ್ಳಲಾಗಿದೆ. ವಿಷಯ ತಜ್ಞರ ಮೂಲಕ ತರಬೇತಿ, ಪ್ರೇರಣಾ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲರ ಪರಿಶ್ರಮಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಓದಿ ಜಿಲ್ಲೆಗೆ ಉತ್ತಮ ಫಲಿತಾಂಶವನ್ನು ನೀಡಬೇಕು ಎಂದ ಅವರು, ಬಿಸಿಎನ್ ಶಿಕ್ಷಣ ಸಂಸ್ಥೆಯ ಶಿಕ್ಷಣ ಸೇವೆ ಶ್ಲಾಘಿಸಿದರು.
ವಿಜ್ಞಾನ, ಇಂಗ್ಲಿಷ್, ಗಣಿತ ವಿಷಯ ಶಿಕ್ಷಕರಾದ ಶೇಖರ ಚಿಕ್ಕಣ್ಣವರ, ಸಿ.ಎಫ್. ಜೋಗಿನ, ಸಿದ್ದಲಿಂಗೇಶ ಹಲಸೂರ ಕಾರ್ಯಾಗಾರ ನಡೆಸಿಕೊಟ್ಟರು. ನೋಡಲ್ ಅಧಿಕಾರಿ ಉಮೇಶ ಹುಚ್ಚಯ್ಯನಮಠ, ಬಿಸಿಎನ್ ವಿಜನ್ ಕಾಲೇಜಿನ ಪ್ರಾಚಾರ್ಯ ಮಂಜುನಾಥ ಬಂಡಿವಾಡ, ಬಿಆರ್‌ಸಿ ಹಾಗೂ ಕಾರ್ಯಕ್ರಮ ಸಂಯೋಜಕ ಈಶ್ವರ ಮೆಡ್ಲೇರಿ, ಎಂ.ಎA. ಹವಳದ, ಎಲ್.ಎಸ್. ಅರಳಹಳ್ಳಿ ಸೇರಿ ಬಿಆರ್‌ಪಿ, ಬಿಆರ್‌ಸಿ, ಮುಖ್ಯ ಶಿಕ್ಷಕರು ಹಾಜರಿದ್ದರು.
ಒಟ್ಟು 23 ಶಾಲೆಯಿಂದ 1053 ವಿದ್ಯಾರ್ಥಿಗಳು, 76 ಶಿಕ್ಷಕರು ಪಾಲ್ಗೊಂಡಿದ್ದರು. ಬಸವರಾಜ ಶೆಟ್ಟರ, ರಾಜಶೇಖರ ಸ್ವಾಮಿ, ಗಿರೀಶ ಬಸರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.
ಸಂಪನ್ಮೂಲ ಶಿಕ್ಷಕಿ, ಎನ್‌ಎಲ್‌ಪಿ ಮಾಸ್ಟರ್ ಟ್ರೇನರ್ ನಂದಾ ಹಂಪಿಹೊಳಿ ಅವರು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವ ಮಾತುಗಳನ್ನಾಡಿ, ವಿದ್ಯಾರ್ಥಿಗಳು ಇಂಗ್ಲೀಷ್, ವಿಜ್ಞಾನ ಮತ್ತು ಗಣಿತವನ್ನು ಕಬ್ಬಿಣದ ಕಡೆಲೆ ಎಂದು ಭಾವಿಸದೇ ಹೆಚ್ಚಿನ ವೇಳೆಯನ್ನು ಈ ವಿಷಯಗಳಿಗೆ ಮೀಸಲಿರಿಸಿಕೊಳ್ಳಿ. ಶಿಕ್ಷಕರು ಮತ್ತು ಸಹಪಾಠಿಗಳೊಂದಿಗೆ ಚರ್ಚಿಸಿ ವಿಷಯ ಮನನ ಮಾಡಿಕೊಳ್ಳಬೇಕು. ಅತ್ಯಮೂಲ್ಯವಾದ ಸಮಯ ಕಳೆದು ಹೋದರೆ ಮರಳಿಬಾರದೆಂಬ ಸತ್ಯ ಅರಿತು ಅಧ್ಯಯನ ವೇಳಾಪಟ್ಟಿ ರಚಿಸಿಕೊಂಡು ಶೃದ್ಧೆಯಿಂದ ಹೆಚ್ಚು ಸಮಯದ ಓದುವುದು ಮತ್ತು ಓದಿದ ವಿಚಾರ ಮನನ ಮಾಡಿಕೊಂಡು ಪರೀಕ್ಷೆಗೆ ಸನ್ನದ್ಧರಾಗಬೇಕು ಎಂದರು.