ಬೆಂಗಳೂರು: ಕಾನ್ಫಿಡೆಂಟ್ ಗ್ರೂಪ್ ಮಾಲೀಕ ಸಿಜೆ ರಾಯ್ (CJ Roy) ಅವರ ನಿಧನಕ್ಕೆ ಬಿಗ್ಬಾಸ್ ಸೀಸನ್ 11ರ ವಿನ್ನರ್ ಹನುಮಂತು ಭಾವುಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಣ ನೀಡಿ ನನ್ನ ಬದುಕಿಗೆ ದಾರಿ ದೀಪವಾಗಿದ್ದವರು ನೀವು, ನಿಮ್ಮ ಋಣವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ ಎಂದು ಹನುಮಂತು ಇನ್ಸ್ಟಾಗ್ರಾಂನಲ್ಲಿ ನೋವಿನ ಪದಗಳಲ್ಲಿ ಬರೆದುಕೊಂಡಿದ್ದಾರೆ.
ಹನುಮಂತು ತಮ್ಮ ಪೋಸ್ಟ್ನಲ್ಲಿ, ಸರಿಗಮಪ ಸೀಸನ್ 12ರಲ್ಲಿ ರನ್ನರ್ ಅಪ್ ಆಗಿದ್ದ ವೇಳೆ ಸಿಜೆ ರಾಯ್ ಅವರು ಹಣ ನೀಡಿ ನನ್ನ ಜೀವನಕ್ಕೆ ಹೊಸ ದಾರಿ ತೋರಿಸಿದರು. ನಂತರ ಬಿಗ್ಬಾಸ್ ಸೀಸನ್ 11ರಲ್ಲಿ ಗೆದ್ದಾಗಲೂ ಪ್ರೀತಿಯಿಂದ ಹಣ ನೀಡಿ ಸಂಭ್ರಮಿಸಿದ್ದರು. ನಿಮ್ಮ ಈ ಉಪಕಾರವನ್ನು ನಾನು ಎಂದಿಗೂ ಮರೆತೇನು ಸಾಧ್ಯವಿಲ್ಲ ಸರ್ ಎಂದು ಹೇಳಿದ್ದಾರೆ.
ಸಿಜೆ ರಾಯ್ ಅವರ ಅಗಲಿಕೆಯ ಸುದ್ದಿ ಕೇಳಿ ಮನಸ್ಸು ತುಂಬಾ ಭಾರವಾಗಿದೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ, ಮಿಸ್ ಯು ರಾಯ್ ಸರ್ ಎಂದು ಹನುಮಂತು ತಮ್ಮ ಭಾವನೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಸಿಜೆ ರಾಯ್ ಅವರು ಹನುಮಂತುಗೆ ಹಣ ನೀಡಿದ್ದ ಸಂದರ್ಭದ ವಿಡಿಯೋವನ್ನು ಹನುಮಂತು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
ಶುಕ್ರವಾರ (ಜ.31) ಮಧ್ಯಾಹ್ನ ಸುಮಾರಿಗೆ ಐಟಿ ದಾಳಿ ವೇಳೆ ಸಿಜೆ ರಾಯ್ ಅವರು ತಮ್ಮ ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.



