ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ನಂದ ಕಿಶೋರ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಯುವ ನಟ ಶಬರೀಶ್ ಎಂಬುವವರ ನಂದ ಕಿಶೋರ್ ವಿರುದ್ಧ ದೂರು ದಾಖಲಿಸಿದ್ದು ತಮ್ಮಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದು, ಈಗ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಅಲ್ಲದೆ ಸುದೀಪ್ ಅವರ ಹೆಸರು ಬಳಸಿ ನನಗೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಶಬರೀಶ್ ಆರೋಪ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರ ಅಭಿಮಾನಿ ಆಗಿರುವ ಶಬರೀಶ್ ಶೆಟ್ಟಿ ಅವರಿಗೆ ನಿರ್ದೇಶಕ ನಂದ ಕಿಶೋರ್ ಒಂಬತ್ತು ವರ್ಷಗಳ ಹಿಂದೆ ಜಿಮ್ ಒಂದರಲ್ಲಿ ಪರಿಚಯವಾದರಂತೆ. ಈ ವೇಳೆ ಸಿಸಿಎಲ್ ನಲ್ಲಿ ಆಡಿಸುವುದಾಗಿ ಭರವಸೆ ನೀಡಿ ಶಬರೀಶ್ ಅವರಿಂದ 22 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದರಂತೆ. ಆದರೆ ಆ ಬಳಿಕ ಸಿಸಿಎಲ್ ನಲ್ಲಿ ಅವಕಾಶ ನೀಡದೆ ವಂಚಿಸಿದ್ದಾರೆ. ಜೊತೆಗೆ ಹಣ ಕೇಳಿದಾಗೆಲ್ಲಾ ಸುದೀಪ್ ಹೆಸರು ಹೇಳಿ ಯಾಮಾರಿಸುತ್ತಿದ್ದಾರೆ ಎಂದು ಶಬರೀಶ್ ಹೇಳಿದ್ದಾರೆ.
‘ನಾನು ಚಿನ್ನ ಅಡವಿಟ್ಟು ಹಣ ಕೊಟ್ಟಿದ್ದೆ’. ತಮ್ಮ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿದ್ದರು. ಆದರೆ ಈಗ ಹಣವೂ ನೀಡುತ್ತಿಲ್ಲ. ಸಿನಿಮಾದಲ್ಲಿ ಅವಕಾಶವೂ ನೀಡಿಲ್ಲ. ಜೊತೆಗೆ ಸಿಸಿಎಲ್ ನಲ್ಲೂ ಆಡಿಸಿಲ್ಲ. ಹಣ ಕೇಳಿದರೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಬರೀಶ್ ಅಳಲು ತೋಡಿಕೊಂಡಿದ್ದಾರೆ.
‘ನಾನು 200 ಗ್ರಾಂ ಚಿನ್ನ ಅಡವಿಟ್ಟು ಅವರಿಗೆ ಹಣ ಕೊಟ್ಟಿದ್ದೆ, ಆ ಚಿನ್ನದ ಲೋನ್ ಕಟ್ಟಿ ಎಂದೆ ಅದನ್ನು ಕಟ್ಟಲಿಲ್ಲ. ನಾನು ಬಡ್ಡಿ ಕಟ್ಟಿದೆ. ಬಡ್ಡಿಯ ಮೇಲೆ ಬಡ್ಡಿ ಬೆಳೆದು ಆ ಚಿನ್ನವನ್ನು ಹರಾಜು ಹಾಕಲಾಯ್ತು. ನನ್ನ ಬಳಿ ಎಲ್ಲದಕ್ಕೂ ದಾಖಲೆ ಇದೆ. ನಾನು ಈ ವಿಚಾರವನ್ನು ಸುದೀಪ್ ಸರ್ ಗಮನಕ್ಕೆ ತರಲು ಪ್ರಯತ್ನ ಪಟ್ಟಾಗ ನನ್ನ ತಡೆಯಲಾಯ್ತು. ಈ ವಿಷಯವನ್ನು ಶಿವಣ್ಣ, ಸುದೀಪ್ ಸರ್ ಗಮನಕ್ಕೆ ತರುತ್ತೇನೆ. ಫಿಲ್ಮ್ ಚೇಂಬರ್ಗೆ ದೂರು ಕೊಡ್ತಿನಿ’ ಎಂದು ಶಬರೀಶ್ ಹೇಳಿದ್ದಾರೆ.