ಬಾರವೊಂದರಲ್ಲಿ ಸಪ್ಲಾಯರ್ ಆಗಿದ್ದ ಯುವಕ….
ವಧು ಹುಡುಕಿ ಮದುವೆ ಮಾಡುವ ಹೆತ್ತವರು ಕನಸು ನುಚ್ಚು ನೂರು…..
ವಿಜಯಸಾಕ್ಷಿ ಸುದ್ದಿ, ಗದಗ
ನಗರದ ಡಂಬಳ ನಾಕಾ ಬಳಿ ಗಾಳಿಪಟದ ಮಾಂಜಾ ದಾರ ಕತ್ತಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಪಿ ರವಿ ಚಿಕಿತ್ಸೆ ಫಲಕಾರಿಯಾಗದೆ ದಾರುಣವಾಗಿ ಸಾವನ್ನಪ್ಪಿದ್ದಾರೆ. ಗದಗನ ಜಿಮ್ಸ್ ಆಸ್ಪತ್ರೆಯಲ್ಲಿ ಆರು ದಿನಗಳ ಕಾಲ ನರಳಾಡಿದ ಯುವಕ ಶುಕ್ರವಾರ ಅಸುನೀಗಿದ್ದಾರೆ.
ತನ್ನ ಕುಟುಂಬದ ಆಧಾರ ಸ್ತಂಭವಾಗಿ ಇಡೀ ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣದೇವರಕೆರೆ ಮೂಲದ ರವಿಯ ದುಡಿಮೆಯಿಂದಲೇ ಕುಟುಂಬ ಸಾಗಬೇಕಿತ್ತು. ಹೀಗಾಗಿ ಆತ ಗದಗ ನಗರಕ್ಕೆ ಕೆಲಸವನ್ನರಸಿ ಬಂದು, ಜೀವನ ಸಾಗಿಸುತ್ತಿದ್ದ.
ಕಾರ ಹುಣ್ಣುಮೆ ಅಂಗವಾಗಿ ಗಾಳಿಪಟವನ್ನು ಹಾರಿಸುವ ಮಕ್ಕಳು, ಯುವಕರು ಬಳಸಿದ ನಿಷೇಧಿತ ಮಾಂಜಾದಾರ ಅಮಾಯಕ ರವಿಯ ಪ್ರಾಣವನ್ನೇ ಬಲಿ ತೆಗೆದುಕೊಂಡಿದೆ.
ಗದಗ ನಗರದ ಡಂಬಳ ನಾಕಾ ಬಳಿ, ಕಳೆದ ಭಾನುವಾರ ಬೈಕ್ ಮೇಲೆ ಹೋಗುತ್ತಿದ್ದ ಪಿ ರವಿ ಇಂಥದೇ ದಾರಕ್ಕೆ ಸಿಕ್ಕು, ಕತ್ತು ಸೀಳಿತ್ತು. ಕೂಡಲೇ ಆತನನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಳೆದ ಆರು ದಿನಗಳ ಕಾಲ ಜೀವನ್ಮರಣದ ನಡುವೆ ನರಳಿ, ಶುಕ್ರವಾರ ಸಾವನ್ನಪ್ಪಿದ್ದಾನೆ.
ಗದಗನಲ್ಲಿ ಬಾರ್ ಒಂದರಲ್ಲಿ ಕೆಲಸವ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮೃತ ಯುವಕನಿಗೆ ಮದುವೆ ಮಾಡಬೇಕೆಂದು ಹೆತ್ತವರು ಕನಸು ಕಾಣುತ್ತಿದ್ದರು. ಇನ್ನೇನು ವಧುವನ್ನು ಹುಡುಕಿ ಮದುವೆ ಮಾಡಬೇಕು ಎನ್ನುವ ತಯಾರಿಯಲ್ಲಿದ್ದರು. ಆದರೆ, ವಿಧಿಯಾಟ ಬೇರೆಯೇ ಇತ್ತು. ಖುಷಿಗಾಗಿ ಹಾರಿಸುವ ಗಾಳಿಪಟ ಯುವಕನ ಜೀವ ತೆಗೆದಿದೆ. ಈಗಾಲೇ ಆರೇಳು ಜನರಿಗೆ ಕೈ, ಕಾಲು, ಕತ್ತು ಸೇರಿದಂತೆ ಅನೇಕ ಕಡೆ ಈ ಅಪಾಯಕಾರಿ ಮಾಂಜಾದಾರ ಗಾಯ ಮಾಡಿದೆ.
ಜೀವಕ್ಕೆ ಕುತ್ತು ತರುವ ಮಾಂಜಾದಾರವನ್ನು ನಿಷೇಧ ಮಾಡಿದರೂ, ಗದಗ-ಬೆಟಗೇರಿ ಅವಳಿ ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇಂತಹ ಅಪಾಯಕಾರಿ ಮಾಂಜಾದಾರವನ್ನು ನಿಷೇಧ ಮಾಡಬೇಕೆಂದು ಸಾರ್ವಜನಿಕರು ಜಿಲ್ಲಾಧಿಕಾರಿಗಳು ಹಾಗೂ ನಗರಸಭೆಗೆ ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.
ಅಮಾಯಕ ಯುವಕನ ಸಾವಿಗೆ ಕಾರಣವಾದ ಗಾಳಿಪಟದ ಮಾಂಜಾದಾರವನ್ನು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನಿಷೇಧಿಸಬೇಕು. ಈ ಯುವಕನ ಸಾವಿಗೆ ನೇರವಾಗಿ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಮುಂದೆ ಬರುವ ಕಾರ ಹುಣ್ಣಿಮೆಗೆ ಯಾವುದೇ ಕಾರಣಕ್ಕೂ ಮಾಂಜಾದಾರ ಮಾರಾಟ ಮಾಡದಂತೆ ಅಂಗಡಿಕಾರರಿಗೆ ಎಚ್ಚರಿಕೆ ನೀಡಬೇಕು. ಈ ವಿಷಯದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ಕ್ರಾಂತಿ ಸೇನಾ ಸಂಘಟನೆ, ಪ್ರಜಾ ಪರಿವರ್ತನ ವೇದಿಕೆ ಮುಂತಾದ ಸಂಘಟನೆಗಳ ನೇತೃತ್ವದಲಿ ಉಗ್ರವಾದ ಹೋರಾಟ ಮಾಡುತ್ತೇವೆ. ಸಂಘಟನೆಕಾರರು ಸ್ವಯಂ ಪ್ರೇರಿತವಾಗಿ ಮಾಂಜಾದಾರ ಮಾರುವ ಅಂಗಡಿಗಳ ಮೇಲೆ ದಾಳಿ ಮಾಡುತ್ತೇವೆ. ಆಗ ಏನಾದರೂ ಅವಘಡ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೆ.
-ಬಾಬು ಬಾಕಳೆ, ಕ್ರಾಂತಿ ಸೇನಾ ಸಂಘಟನೆಯ ಮುಖಂಡ
ಇದೇ ರೀತಿ ನಗರದಲ್ಲಿ ಸಾಕಷ್ಟು ಅವಘಡಗಳಾಗಿವೆ. ತೋಂಟದಾರ್ಯ ಮಠದ ಹತ್ತಿರ ಪಾರಿವಾಳವೊಂದು ದಾರಕ್ಕೆ ಸಿಲುಕಿ ಸತ್ತಿದೆ. ನನ್ನ ಮಗಳ ಕೈಗೆ ಸಹ ಬಿರುಸಾದ ಗಾಯ ಆಗಿದೆ. ಪಿ ರವಿ ಅವರ ಸಾವು ನೋವಿನ ವಿಷಯ. ಸಚಿವರಾದ ಹೆಚ್ ಕೆ ಪಾಟೀಲರು ಮೃತ ರವಿಯ ಮನೆಗೆ ಹೋಗಿ ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬಿ, ಸೂಕ್ತ ಪರಿಹಾರ ನೀಡಬೇಕು.
-ವಿಶ್ವನಾಥ್ ಖಾನಾಪೂರ, ಗದಗ ಜಿಲ್ಲಾ ವಿಕಾಸ ವೇದಿಕೆ ಅಧ್ಯಕ್ಷರು.