ಚಿಕ್ಕಮಗಳೂರು: ಇನ್‌ಸ್ಟಾಗ್ರಾಂನಲ್ಲಿ ಯುವತಿಗೆ ನಿರಂತರವಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ನಡೆದಿದೆ. ಕೊಲೆಯಾದ ಯುವಕನನ್ನು ಮಂಜುನಾಥ್ (21) ಎಂದು ಗುರುತಿಸಲಾಗಿದೆ.
ಮಂಜುನಾಥ್ ತರೀಕೆರೆ ತಾಲೂಕಿನ ಉಡೇವಾ ಗ್ರಾಮದ ನಿವಾಸಿಯಾಗಿದ್ದು, ಅತ್ತಿಗನಾಳು ಗ್ರಾಮದ ಸಮೀಪ ಈ ಘಟನೆ ನಡೆದಿದೆ. ಪರಿಚಯವಿದ್ದ ಯುವತಿಗೆ ಮಂಜುನಾಥ್ ಪದೇಪದೇ ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಕಳುಹಿಸುತ್ತಿದ್ದ ಎಂದು ತಿಳಿದುಬಂದಿದೆ. ಯುವತಿಗೆ ಈಗಾಗಲೇ ವೇಣು ಎಂಬ ಯುವಕನೊಂದಿಗೆ ನಿಶ್ಚಿತಾರ್ಥವಾಗಿದ್ದು, ಈ ವಿಚಾರವನ್ನು ತಿಳಿಸಿ ಮೆಸೇಜ್ ಮಾಡಬೇಡಿ ಎಂದು ಹೇಳಿದ್ದರೂ ಮಂಜುನಾಥ್ ಮುಂದುವರಿಸಿದ್ದಾನೆ ಎನ್ನಲಾಗಿದೆ.
ಈ ವಿಷಯವನ್ನು ಯುವತಿ ತನ್ನ ನಿಶ್ಚಿತಾರ್ಥಗೊಂಡ ಯುವಕ ವೇಣುಗೆ ತಿಳಿಸಿದ್ದಾಳೆ. ಬಳಿಕ ಮಾತನಾಡಬೇಕೆಂದು ಮಂಜುನಾಥ್‌ನನ್ನು ಕರೆಸಿಕೊಂಡ ವೇಣು, ತನ್ನ ಸ್ನೇಹಿತರಾದ ಕಿರಣ್, ಅಪ್ಪು ಹಾಗೂ ಮಂಜು ಜೊತೆಗೂಡಿ ಜಗಳವಾಡಿದ್ದಾನೆ. ಗಲಾಟೆ ವೇಳೆ ಮಂಜುನಾಥ್‌ಗೆ ಚಾಕುವಿನಿಂದ ಇರಿದು ನಾಲ್ವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಗಂಭೀರವಾಗಿ ಗಾಯಗೊಂಡ ಮಂಜುನಾಥ್‌ನ್ನು ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರಕರಣ ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



