ಹಾಸನ: ಹಣಕಾಸು ವಿಚಾರಕ್ಕೆ ಸಂಬಂಧಿಸಿದಂತೆ ಯುವಕನನ್ನು ಕರೆದುಕೊಂಡು ಹೋಗಿ ಬರ್ಬರವಾಗಿ ಹತ್ಯೆಗೈದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕು ವ್ಯಾಪ್ತಿಯ ಚಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ವರುಣ್ ಕೆ.ಎಂ (22) ಎಂದು ಗುರುತಿಸಲಾಗಿದೆ. ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟ ಹಿಂಭಾಗದಲ್ಲಿ ದುಷ್ಕರ್ಮಿಗಳು ಹತ್ಯೆ ನಡೆಸಿರುವುದು ತಿಳಿದುಬಂದಿದೆ.
ಹತ್ಯೆ ಬಳಿಕ ಸಾಕ್ಷ್ಯ ನಾಶಗೊಳಿಸಲು ಶವವನ್ನು ಸುಟ್ಟುಹಾಕಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಮಾರ್ಚ್ 15ರಂದು ಗಂಡಸಿ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಾಗಿತ್ತು. ವರುಣ್ ಸ್ನೇಹಿತ ನೀಡಿದ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿಸಿದಾಗ ಹತ್ಯೆಯ ಸುಳಿವು ಸಿಕ್ಕಿದೆ. ಪ್ರಸ್ತುತ ಆರೋಪಿಗಳ ಪತ್ತೆ ಹಾಗೂ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.



