ಕಾರವಾರ: ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಜೆಡಿಎಸ್ ಮುಖಂಡೆಯ ಪುತ್ರನಿಗೆ ಧಾರವಾಡ ವಿಭಾಗೀಯ ಪೀಠ ಜಾಮೀನು ಮಂಜೂರು ಮಾಡಿದೆ.
ಆರೋಪಿ ಚಿರಾಗ್ ಕೊಠಾರಕರ್ಗೆ ನ್ಯಾಯಾಲಯ ಜಾಮೀನು ನೀಡಿದೆ. ಯುವತಿ ಆತ್ಮಹತ್ಯೆ ಪ್ರಕರಣದಲ್ಲಿ ಅವರನ್ನು ಜನವರಿ 29ರಂದು ಕದ್ರಾ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದರು. ಕಳೆದ ಸುಮಾರು ಒಂದೂವರೆ ತಿಂಗಳಿನಿಂದ ಜೈಲಿನಲ್ಲಿ ಇದ್ದರು.
ರಿಶೇಲ್ ಡಿಸೋಜಾ ಎಂಬ ಯುವತಿಯನ್ನು ಚಿರಾಗ್ ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಜನವರಿ 10ರಂದು ಕದ್ರಾದ ಕೆಪಿಸಿ ಕಾಲೊನಿಯಲ್ಲಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದಳು.
ನಮ್ಮ ಪುತ್ರಿಗೆ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಚಿರಾಗ್ ವಿರುದ್ಧ ಯುವತಿಯ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು.
ಚಿರಾಗ್ ಬಂಧಿಸುವಂತೆ ಆಗ್ರಹಿಸಿ ರಿಶೇಲ್ ಕುಟುಂಬದವರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ಪ್ರಕರಣ ಸಂಬಂಧ ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರು ಪ್ರಕರಣ ದಾಖಲಿಸಿದ್ದರು.



