ವಿಜಯಸಾಕ್ಷಿ ಸುದ್ದಿ, ಗದಗ: ಒಂದು ವರ್ಷದ ಅವಧಿಯಲ್ಲಿ ಇಲ್ಲಿನ ಕುಟುಂಬಗಳ ಆರೋಗ್ಯದಲ್ಲಿ ಸ್ಪಷ್ಟ ಸುಧಾರಣೆ ಆಗಬೇಕು ಎಂಬುದು ನಮ್ಮ ಗುರಿ. ಜನರ ಆರೋಗ್ಯದ ಕಾಳಜಿ ಈ ‘ನಮ್ಮ ಕ್ಲೀನಿಕ್’ಗಳ ಮೂಲಕ ಸಾಧ್ಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಡೋರಗಲ್ಲಿ, ಕುರಹಟ್ಟಿ ಪೇಟೆ, ಹಮಾಲರ ಕಾಲೋನಿ ಹಾಗೂ ಆಶ್ರಯ ಕಾಲೊನಿಯಲ್ಲಿ ಸ್ಥಾಪಿಸಲಾದ ನೂತನ ‘ನಮ್ಮ ಕ್ಲೀನಿಕ್’ಗಳನ್ನು ರವಿವಾರ ಉದ್ಘಾಟಿಸಿ ಸಚಿವರು ಮಾತನಾಡಿದರು.
ಗದಗ ನಗರದ ಆರೋಗ್ಯ ಜಾಲವನ್ನು ಗಣನೀಯವಾಗಿ ವಿಸ್ತರಿಸಲಾಗುತ್ತಿದೆ. ಪ್ರತಿ ಕ್ಲಿನಿಕ್ ಮೂಲಕ ಸುಮಾರು 3 ಸಾವಿರ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತದೆ. ಬಡ ಜನರ ಆರೋಗ್ಯ ಸುಧಾರಣೆಯಲ್ಲಿ ‘ನಮ್ಮ ಕ್ಲೀನಿಕ್’ ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಸ್ಥಳೀಯ ನಾಗರಿಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದ ಸಚಿವರು, ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ನಿಮ್ಮ ಆರೋಗ್ಯ, ನಮ್ಮ ಆದ್ಯತೆ ಎಂಬ ಧ್ಯೇಯವಾಕ್ಯದೊಂದಿಗೆ ಗದಗ ನಗರದಲ್ಲಿ ಸರ್ಕಾರದ ‘ನಮ್ಮ ಕ್ಲೀನಿಕ್’ ಯೋಜನೆ ಯಶಸ್ವಿಯಾಗಿ ಜನಸಾಮಾನ್ಯರ ಆರೋಗ್ಯ ಸೇವೆಗೆ ಹೊಸ ಆಯಾಮ ನೀಡಲಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21 ‘ನಮ್ಮ ಕ್ಲಿನಿಕ್’ಗಳು ಕಾರ್ಯನಿರ್ವಹಿಸುತ್ತಿದ್ದು, ಅದರಲ್ಲಿ ಗದಗ ನಗರದಲ್ಲೇ 7 ಕ್ಲಿನಿಕ್‌ಗಳು ಸೇವೆ ನೀಡುತ್ತಿವೆ. ಪ್ರತಿ 15 ಸಾವಿರ ಜನರಿಗೆ ಒಂದು ಕ್ಲಿನಿಕ್ ಸ್ಥಾಪಿಸುವ ಗುರಿಯೊಂದಿಗೆ ಈ ಯೋಜನೆ ಜಾರಿಯಲ್ಲಿದೆ ಎಂದು ತಿಳಿಸಿದರು.
ಪ್ರತಿ ಕ್ಲಿನಿಕ್‌ನಲ್ಲಿ ನಾಲ್ವರು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ, ಉಚಿತ ಔಷಧಿ ವಿತರಣೆ, ಮೂಲಭೂತ ಆರೋಗ್ಯ ಪರೀಕ್ಷೆಗಳು ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ ನಡೆಯುತ್ತಿದೆ. ವಾರಕ್ಕೊಮ್ಮೆ ಸಾರ್ವಜನಿಕರಿಗೆ ಯೋಗಾಭ್ಯಾಸವನ್ನು ಆಯೋಜಿಸಲಾಗುತ್ತಿದ್ದು, ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆಗೆ ಒತ್ತು ನೀಡಲಾಗುತ್ತಿದೆ. ಈ ಎಲ್ಲಾ ಸೇವೆಗಳ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಗದಗ–ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಸಿದ್ದು ಪಾಟೀಲ, ಎಸ್.ಎನ್. ಬಳ್ಳಾರಿ, ಕೃಷ್ಣ ಪರಾಪುರ, ಯುವರಾಜ ಬಳ್ಳಾರಿ, ಮರ್ಕಾಂಡಪ್ಪ ಹಾದಿಮನಿ, ದುರಗೇಶ್ ವಿಭೂತಿ, ಪೌರಾಯುಕ್ತ ರಾಜಾರಾಮ್ ಪವಾರ, ಡಾ. ವೆಂಕಟೇಶ ರಾಠೋಡ್, ಡಾ. ಗಡಾದ, ಡಾ. ಪ್ರೀತಂ ಖೋತ್, ಎಲ್.ಕೆ. ಜೂಲಕಟ್ಟಿ, ಡಾ. ಗಿರಡ್ಡಿ, ಅ. ಮಹಮ್ಮದ್ ಮುಸ್ತಾಪ, ಶಾಕೀರ್ ಕಾತರಕಿ, ಉಸ್ಮಾನ್ ಮಾಳೊಕೊಪ್ಪ, ವಿತೇಂದ್ರಸಿಂಗ್ ರಜಪೂತ್ ಇದ್ದರು.
“ಸರ್ಕಾರದ ಉದ್ದೇಶ ಜನಸಾಮಾನ್ಯರಿಗೆ ಮನೆಬಾಗಿಲಿನಲ್ಲೇ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದಾಗಿದೆ. ‘ನಮ್ಮ ಕ್ಲೀನಿಕ್’ ಯೋಜನೆಯ ಮೂಲಕ ನಗರದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ತಕ್ಷಣದ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ನಗರದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾದ ಈ ಕ್ಲೀನಿಕ್‌ಗಳಿಂದ ಸಣ್ಣಪುಟ್ಟ ರೋಗಗಳಿಗೆ ಚಿಕಿತ್ಸೆ, ಉಚಿತ ಔಷಧಿ ವಿತರಣೆ, ರಕ್ತದೊತ್ತಡ, ಮಧುಮೇಹ ಸೇರಿದಂತೆ ಮೂಲಭೂತ ಆರೋಗ್ಯ ಪರೀಕ್ಷೆಗಳು ಸುಲಭವಾಗಿ ಲಭ್ಯವಾಗಲಿವೆ”
-
ಎಚ್.ಕೆ. ಪಾಟೀಲ.
ಜಿಲ್ಲಾ ಉಸ್ತುವಾರಿ ಸಚಿವರು.



