ವಿಜಯಸಾಕ್ಷಿ ಸುದ್ದಿ, ಗದಗ: ಯುವಕರನ್ನು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸುವ ಮೂಲಕ ಅವರನ್ನು ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಯುವಂತೆ ಸನ್ನದ್ಧಗೊಳಿಸುವದು ಎಂದಿಗಿಂತ ಇಂದು ಅವಶ್ಯವಿದೆ ಎಂದು ಅಡ್ನೂರ ರಾಜೂರ ಗದಗ ಬೃಹನ್ಮಠದ ಪೂಜ್ಯ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಗುರುವಾರ ನಗರದ ಗಾಣಿಗ ಭವನದಲ್ಲಿ ಗದಗ-ಬೆಟಗೇರಿ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಸಮಿತಿ ಶ್ರೀಮದ್ ಕಾಶೀ ನೂತನ ಜಗದ್ಗುರುಗಳವರ ಆಷಾಡ ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಶ್ರೀ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
ಯುವಕರೂ ಸಹ ಇಂತಹ ಇಷ್ಟಲಿಂಗ ಮಹಾಪೂಜೆ, ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಅಂದಾಗ ಅವರಲ್ಲಿ ಧರ್ಮ ಸಂಸ್ಕಾರ, ಆಧ್ಯಾತ್ಮಿಕ ಸಂಸ್ಕೃತಿ ತಿಳಿಯುವದು. ಆ ಮೂಲಕ ಅವರಲ್ಲಿ ಸದ್ಗುಣಗಳು ಬಂದು ಅವರು ಜೀವನಲ್ಲಿ ಸತ್ಪ್ರಜೆಗಳಾಗಿ ಬಾಳಲು ಪೂರಕವಾಗುವದು ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ಜಂಗಮವಾಡಿಮಠ ವಾರಣಾಸಿ ಕಾಶೀ ಮಹಾಪೀಠದ ಜ. ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು, ಸತ್ಯ, ನಿಷ್ಠೆ, ಪ್ರಾಮಾಣಿಕತೆಯುಳ್ಳವರು ಜೀವನದಲ್ಲಿ ಯಶಸ್ಸನ್ನು ಸಾಧಿಸಬಲ್ಲರು. ಇವರಿಗೆ ಸಮಾಜದಲ್ಲಿ ಗೌರವ ಇದೆ ಎಂದರು.
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜ್ಞಾನಾರ್ಜನೆಗೆ ಹಾಗೂ ಸತ್ಕಾರ್ಯಗಳಿಗೆ ಸದುಪಯೋಗ ಮಾಡಿಕೊಳ್ಳಬೇಕು. ಇಂದು ಮೊಬೈಲ್ ಬಂದು ಸುಳ್ಳು ಹೇಳುವದನ್ನು ಇನ್ನಷ್ಟು ಸುಗಮಗೊಳಿಸಿದೆ. ಆದರೆ ಸುಳ್ಳು ಸದಾವಕಾಲ ಫಲಿಸದು, ಅದರಿಂದ ಹಾನಿಯೇ ಹೆಚ್ಚು. ಆದ್ದರಿಂದ ಮನೆಯಲ್ಲಿ ಹಿರಿಯರು ಸತ್ಯವನ್ನು ಮಾತನಾಡುವ ಮೂಲಕ ಮಕ್ಕಳಿಗೂ ಅಂತಹ ಸಂಸ್ಕಾರವನ್ನು ರೂಢಿಸಬೇಕು ಎಂದರು.
ಭಕ್ತಿ ಸೇವೆ ವಹಿಸಿಕೊಂಡಿದ್ದ ಪ್ರಭುಸ್ವಾಮಿ ದಂಡಾವತಿಮಠ, ಸಿದ್ಧರಾಮೇಶ್ವರ ಬಾರಕೇರ, ಕೆ.ಎಸ್. ಕೋರಿಮಠ, ಶರಣಪ್ಪ ಕುರಡಗಿ, ಮಲ್ಲಿಕಾರ್ಜುನ ಸುರಕೋಡ, ಶಿವಯೋಗಿ ತೆಗ್ಗಿನಮಠ, ಪ್ರಶಾಂತ ತಂಬ್ರಳ್ಳಿಮಠ, ಚನ್ನಬಸವರಾಜ ಹಿರೇಮಠ, ಪ್ರವೀಣ ಚನ್ನಳ್ಳಿಮಠ, ಫಕ್ಕೀರಯ್ಯಶಾಸ್ತ್ರಿ ಹಿರೇಮಠ, ರೋಹಿತ ಅಬ್ಬಿಗೇರಿ, ಆಂಜನೇಯ ಕಟಗಿ, ರಾಜಶೇಖರ ಮುಧೋಳ ದಂಪತಿಗಳನ್ನು ಪೂಜ್ಯರು ಸನ್ಮಾನಿಸಿ ಗೌರವಿಸಿದರು.
ಮಂಗಳಾ ಯಾನಮಶೆಟ್ಟಿ ಪ್ರಾರ್ಥಿಸಿದರು. ಗದಗ ಜಿಲ್ಲಾ ವೀರಶೈವ ಮಹಾಸಭಾದ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಸ್ವಾಗತಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ವ್ಹಿ.ಕೆ. ಗುರುಮಠ ನಿರೂಪಿಸಿ ವಂದಿಸಿದರು.
ನರೇಗಲ್ ಹಿರೇಮಠದ ಪೂಜ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಶ್ರೀ ಸಿದ್ಧಾಂತ ಶಿಖಾಮಣಿ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ಭಯ ದುರ್ಗುಣಗಳ ಸೇನಾಧಿಪತಿಯಾಗಿದ್ದು, ಸತ್ಯ ಮತ್ತು ಪ್ರಾಮಾಣಿಕತೆಯಿಂದ ಜೀವನ ಮಾಡುವವರು ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ. ಸತ್ಯ ಪರಿಪಾಲನೆಯ ಅಗತ್ಯವಿದೆ. ಸತ್ಯದಿಂದ ನಡೆಯುವದೂ ಸಹ ಒಂದು ತಪಸ್ಸು ಇದ್ದಂತೆ ಎಂದರು.