ವಿಜಯಸಾಕ್ಷಿ ಸುದ್ದಿ, ಗದಗ: ಜಾಗತಿಕವಾಗಿ ಹದಿಹರೆಯದ ವಿದ್ಯಾರ್ಥಿಗಳು ಪರಸ್ಪರ ಆಕರ್ಷಣೆಯಿಂದ ಹಾಗೂ ಅನೇಕ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಯೌವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಯೌವನವನ್ನು ಸದುಪಯೋಗಪಡಿಸಿಕೊಳ್ಳಲು ಮಾನಸಿಕ, ದೈಹಿಕ, ಸಾಮಾಜಿಕ ಆರೋಗ್ಯದ ಹಿತಕ್ಕಾಗಿ ಸಮಾಜದಲ್ಲಿ ಒಳ್ಳೆಯ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕೆಂದು ಡಾ. ಅರುಂಧತಿ ಕೆ ಕಿವಿಮಾತು ಹೇಳಿದರು.
ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಜಿಮ್ಸ್ ನರ್ಸಿಂಗ್ ಮಹಾವಿದ್ಯಾಲಯ ಗದಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ಯುವಕರು ಸಧೃಢ ಆರೋಗ್ಯವನ್ನು ಹೊಂದಿ, ದೇಶದ ಭವಿಷ್ಯ ರೂಪಿಸುವಲ್ಲಿ ಕೈಜೋಡಿಸಬೇಕು. ಇಂದಿನ ಯುವ ಜನಾಂಗದಲ್ಲಿ ಸಾಮಾಜಿಕ ಮೌಲ್ಯಗಳು ಹಾಗೂ ನೈತಿಕತೆ ಇಲ್ಲದಾಗಿದ್ದು, ಗುರು ಹಿರಿಯರು, ತಂದೆ-ತಾಯಿ ಎನ್ನುವ ಗೌರವವಿಲ್ಲದೆ ಆಧುನಿಕ ಮಾಧ್ಯಮ-ತಂತ್ರಜ್ಞಾನಕ್ಕೆ ಮಾರು ಹೋಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಶೇ. 30ಕ್ಕಿಂತ ಹೆಚ್ಚು ಯುವಜನತೆ ಇದ್ದು, ಇವರೆಲ್ಲರೂ ಭಾವೀ ಭಾರತದ ಜವಾಬ್ದಾರಿಯುತ ಪ್ರಜೆಗಳಾಗಿ ಸಧೃಢ ಬಾರತ ನಿರ್ಮಿಸಲು ದೇಶದ ಸಂಪನ್ಮೂಲಗಳಾಗಿ ದೇಶಕ್ಕೆ ಕೋಡುಗೆಯಾಗಿ ತಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕೆಂದರು.
ರಾಷ್ಟ್ರೀಯ ಯುವ ದಿನಾಚರಣೆ ನಿಮಿತ್ತ ಹೆಚ್.ಐ.ವಿ. ಏಡ್ಸ್ ಕುರಿತು ಭಿತ್ತಿಚಿತ್ರ ಸ್ಪರ್ಧೆಯಲ್ಲಿ ವಿಜೇತರಾದ ಜಿಮ್ಸ್ ನರ್ಸಿಂಗ್ ಕಾಲೇಜಿನ ಸುದೀಪರೆಡ್ಡಿ ಹುಲ್ಲೂರ (ಪ್ರಥಮ ಸ್ಥಾನ), ಮಹಮದ್ ಸೋಹೆಲ್ (ದ್ವಿತೀಯ ಸ್ಥಾನ) ಹಾಗೂ ಅಶ್ವಿನಿ ಮತ್ತು ಯಲ್ಲಮ್ಮ (ತೃತೀಯ ಸ್ಥಾನ) ಇವರುಗಳಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಡಾ. ಜ್ಯೋತಿ ಕರಿಗೌಡರ ಅಧ್ಯಕ್ಷೀಯ ನುಡಿಗಳನ್ನಾಡಿ, ಇಂದಿನ ಯುವಕರು ದುಶ್ಚಟಗಳಿಂದ ದೂರವಿದ್ದು, ಯೌವನವನ್ನು ಜೋಪಾನ ಮಾಡಿಕೊಳ್ಳಬೇಕೆಂದು ಹೇಳಿದರು.
ಸಮಾರಂಭದಲ್ಲಿ ಜಿಮ್ಸ್ ನರ್ಸಿಂಗ್ ಕಾಲೇಜಿನ ಪ್ರಾದ್ಯಾಪಕರಾದ ಪ್ರೊ. ಶಿವನಗೌಡರ್, ಪ್ರೊ. ಉಷಾ, ಪ್ರೊ. ಶಾರದಾ, ಪ್ರೊ. ಶಿವರಾಜ, ಪ್ರೊ. ಸಂಜಯ ಸೇರಿದಂತೆ ಪ್ರ‍್ರಾಧ್ಯಾಪಕ ವೃಂದದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಲಕ್ಷ್ಮೀ ಜಾಧವ ಪಾರ್ಥಿಸಿದರು. ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಿ.ಬಿ. ಲಾಳಗಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಮುದಾಯ ವಿಭಾಗದ ಮುಖ್ಯಸ್ಥರಾದ ಪ್ರೊ. ಸ್ಟೇಫಿನ್ ವಂದಿಸಿದರು.
ಆರೋಗ್ಯ ಇಲಾಖೆಯ ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಬಿ.ಬಿ. ಲಾಳಗಟ್ಟಿ ರಾಷ್ಟ್ರೀಯ ಯುವ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ, ಇಂದಿನ ಯುಗದಲ್ಲಿ ಯುವಕರು ಆರೋಗ್ಯ ಅರಿವವನ್ನು ಮೂಡಿಸಿ, ಶಿಕ್ಷಣವನ್ನು ಪರಿವರ್ತಿಸುವುದು ಎನ್ನುವ ಘೋಷ ವಾಕ್ಯದೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಣವನ್ನು ಹೆಚ್ಚು ಪ್ರಸ್ತುತ, ನ್ಯಾಯ ಸಮ್ಮತವಾಗಿಸುವ ನಿಟ್ಟಿನಲ್ಲಿ ಯುವಜನರ ಪಾತ್ರ ಮುಖ್ಯವಾಗಿದೆ. ಜಾತಿ, ಧರ್ಮ, ಲಿಂಗ, ಗುಂಪು ಆಧಾರಿತ ಸವಾಲುಗಳನ್ನು ಎದುರಿಸಿ ಯುವಕರು ಸನ್ನಡತೆಯನ್ನು ಅಳವಡಿಸಿಕೊಳ್ಳಬೆಂದು ತಿಳಿಸಿದರು.