ಕಲ್ಯಾಣ್: ಮಹಾರಾಷ್ಟ್ರದ ಕಲ್ಯಾಣ್‌ನಲ್ಲಿ ನಾಯಿ ಕಚ್ಚಿದ ಬಳಿಕ ರೇಬಿಸ್ ಭೀತಿ ಮನಸ್ಸಿಗೆ ಹೊತ್ತುಕೊಂಡ ಬ್ಯಾಂಕ್ ನೌಕರನೊಬ್ಬ ಆತ್ಮಹತ್ಯೆಗೆ ಶರಣಾದ ದುಃಖದ ಘಟನೆ ನಡೆದಿದೆ. ಮೃತರನ್ನು 30 ವರ್ಷದ ಆಯುಷ್ ವಿಶ್ವನಾಥ್ ಅಮೀನ್ ಎಂದು ಗುರುತಿಸಲಾಗಿದೆ.
ಕಲ್ಯಾಣ್ ಪೂರ್ವದ ಟಿಸ್ಗಾಂವ್ ನಾಕಾ ಪ್ರದೇಶದ ಸಹಜೀವನ್ ಸೊಸೈಟಿಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಅಮೀನ್, ಕಳೆದ ಎಂಟು ವರ್ಷಗಳಿಂದ ಭಾರತ್ ಬ್ಯಾಂಕ್ ಥಾಣೆ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ಬೀದಿ ನಾಯಿ ಅವರ ಕಾಲಿಗೆ ಕಚ್ಚಿತ್ತು. ಘಟನೆಯ ಬಳಿಕ ಅವರು ಕೇವಲ ಒಂದು ರೇಬಿಸ್ ನಿರೋಧಕ ಇಂಜೆಕ್ಷನ್ ಮಾತ್ರ ಪಡೆದಿದ್ದರು.
ಕಳೆದ ನಾಲ್ಕು ದಿನಗಳಿಂದ ಅವರ ನಡವಳಿಕೆಯಲ್ಲಿ ಅಸಾಮಾನ್ಯ ಬದಲಾವಣೆ ಕಂಡುಬಂದಿದ್ದವು ಎಂದು ಕುಟುಂಬದವರು ತಿಳಿಸಿದ್ದಾರೆ. ಭಾನುವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸ್ಥಳದಿಂದ ಆತ್ಮಹತ್ಯಾ ಪತ್ರ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ರೇಬಿಸ್ ಲಕ್ಷಣಗಳು ಕಾಣಿಸಿಕೊಂಡಿವೆ ಎಂಬ ಆತಂಕವನ್ನು ಉಲ್ಲೇಖಿಸಿದ್ದಾರೆ.
ಈ ಕುರಿತು ಕೊಲ್ಸೆವಾಡಿ ಪೊಲೀಸ್ ಠಾಣೆಯಲ್ಲಿ ಎಡಿಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಗುರವ್ ತಿಳಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ರೇಬಿಸ್ ಬಗ್ಗೆ ತಿಳಿದುಕೊಳ್ಳಿ
ರೇಬಿಸ್ ಸೋಂಕು ಮಾರಕವಾದರೂ, ಸಮಯಕ್ಕೆ ಸರಿಯಾಗಿ ಪಿಇಪಿ (ಪೋಸ್ಟ್ ಎಕ್ಸ್‌ಪೋಜರ್ ಪ್ರೊಫೈಲಾಕ್ಸಿಸ್) ಲಸಿಕೆ ಪಡೆದರೆ ಸಂಪೂರ್ಣವಾಗಿ ತಡೆಯಬಹುದು. ಸೋಂಕಿನ ಬಳಿಕ ಲಕ್ಷಣಗಳು ಕಾಣಿಸಿಕೊಳ್ಳಲು ಸಾಮಾನ್ಯವಾಗಿ 1ರಿಂದ 3 ತಿಂಗಳುಗಳವರೆಗೆ ಸಮಯ ಹಿಡಿಯಬಹುದು. ಒಮ್ಮೆ ಲಕ್ಷಣಗಳು ಆರಂಭವಾದರೆ, ರೋಗವು ಮೆದುಳು ಮತ್ತು ಬೆನ್ನುಹುರಿಯನ್ನು ಹಾನಿಗೊಳಿಸುತ್ತದೆ.
ಪ್ರಾರಂಭಿಕ ಲಕ್ಷಣಗಳಲ್ಲಿ: ಕಚ್ಚಿದ ಸ್ಥಳದಲ್ಲಿ ತುರಿಕೆ, ಸುಡುವಿಕೆ ಅಥವಾ ಮರಗಟ್ಟುವಿಕೆ, ಸೌಮ್ಯ ಜ್ವರ, ತಲೆನೋವು, ಹಸಿವು ಕಡಿಮೆ, ಗಂಟಲು ನೋವು, ಆಯಾಸ, ಸ್ನಾಯು ನೋವು
ವೈದ್ಯರ ಸಲಹೆ ಮತ್ತು ಪೂರ್ಣ ಲಸಿಕೆ ಚಿಕಿತ್ಸೆಯೇ ರೇಬಿಸ್ ವಿರುದ್ಧದ ಸುರಕ್ಷಿತ ಮಾರ್ಗ. ಮಾನಸಿಕ ಭಯವು ಕೆಲವೊಮ್ಮೆ ರೋಗಕ್ಕಿಂತ ಅಪಾಯಕಾರಿಯಾಗಬಹುದು.



