ಸಮಾಜ ಅಭಿವೃದ್ಧಿಗೆ ಯುವಕರು ಕೈಜೋಡಿಸಿ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ:‌ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಯುವಕರು ಕೈಜೋಡಿಸಬೇಕು ಮತ್ತು ಇದರಲ್ಲಿ ಅವರ ಸಹಭಾಗಿತ್ವ ತುಂಬಾ ಮುಖ್ಯ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಹೆಚ್.ಪಾಟೀಲ ರವರು ಕರೆ ನೀಡಿದರು.

Advertisement

ನಗರದ ಶ್ರೀಮತಿ ಶಕುಂತಲಾ ಪಾಟೀಲ್ ಇನ್ಸ್ಟಿಟ್ಯೂಟ್‌ ಆಫ್ ನರ್ಸಿಂಗ್ ಸೈನ್ಸಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ನರ್ಸಿಂಗ್ ವಿದ್ಯಾರ್ಥಿಗಳ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಡವರು ಕಷ್ಟವೆಂದು ಬಂದರೆ ನಿರ್ಲಕ್ಷ್ಯ ಮಾಡಬೇಡಿ. ಅಂಥವರು ಇದ್ದರೆ ನಮ್ಮ ಹಿರಿಯರ ಗಮನಕ್ಕೆ ತನ್ನಿ. ಕಷ್ಟದಲ್ಲಿ ಸಹಾಯ ಮಾಡಿದ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಡವರು ನೆನಪಿಟ್ಟುಕೊಳ್ಳುತ್ತಾರೆ ಎಂದು ತಿಳಿಸಿದರು.

ಗದಗ ನಗರದ ಎಲ್‌ವೈಡಿಎಂ ಸ್ಪರ್ಶ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಧನೇಶ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಅಂಕಗಳಿಸುವ ಮೂಲಕ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು. ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗೊತ್ತಿ ಮುಂದಿನ ಮೂರು ವರ್ಷ ಶಿಕ್ಷಣ ಪಡೆದವರಿಗೆ ದೇಶ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಉತ್ತಮ ಅವಕಾಶಗಳಿವೆ. ನರ್ಸಿಂಗ್ ಶಿಕ್ಷಣ ಪಡೆದವರಿಗೆ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಗೌರವಯುತ ಬದುಕು ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾದಾನ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಬಿ. ಹುಯಿಲಗೋಳ ಮಾತನಾಡಿ, ಈ ನರ್ಸಿಂಗ್ ಸಂಸ್ಥೆಯನ್ನು ಪ್ರಾರಂಭಿಸಲು ವಿಶ್ವನಾಥ ಪಾಟೀಲರು ಶ್ರಮವಹಿಸಿದ್ದಾರೆ. ಅನೇಕ ವ್ಯಕ್ತಿಗಳ ವಿರೋಧವಿದ್ದರೂ ಕೂಡಾ ಈ ಸಂಸ್ಥೆಯನ್ನು ಪ್ರತೀಕ ಹುಯಿಲಗೋಳರ ಸಹಯೋಗದಲ್ಲಿ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

ಭಾರತೀಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಪ್ರೊ. ಎಸ್.ವೈ. ಚಿಕ್ಕಟ್ಟಿ ಮಾತನಾಡಿ, ನರ್ಸಿಂಗ್ ಹಾಗೂ ಅರೆ ವೈದ್ಯಕೀಯ ಕೋರ್ಸುಗಳಿಗೆ ಇಂದು ವಿಫುಲವಾದ ಅವಕಾಶಗಳಿವೆ ಎಂದು ತಿಳಿಸಿದರು.

ಡಾ. ವೀರೇಶ್ ಕೆ.ಹಂಚಿನಾಳ, ಬಾಗಲಕೋಟೆ ಆರ್ಯಭಟ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ ಕಾಲೇಜಿನ ಚೇರಮನ್ ಪ್ರಶಾಂತ ಮಸೂದಿ ಮಾತನಾಡಿದರು. ಶಿವನಗೌಡ ವಿ.ಎಂ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯಾಧಿಕಾರಿ ಡಾ. ಪವನ ಹುಯಿಲಗೋಳ, ಪ್ರಾಂಶುಪಾಲ ರಂಗನಾಥ ಎಂ.ವಿ, ಕಾರ್ಯದರ್ಶಿ ಭೀಮಸೇನ ಹುಯಿಲಗೋಳ ಉಪಸ್ಥಿತರಿದ್ದರು. ಕಾವ್ಯ ಬೀರನೂರು ಹಾಗೂ ಸುನೀಲ ಗುಡಗುಂಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ವರ್ಗದವರು, ಸ್ಪರ್ಶ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್‌ನ ಎಲ್ಲಾ ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಗದಗ ಜಿಲ್ಲಾ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಡಾ. ರೇಖಾ ಸೋನಾವನೆ ಮಾತನಾಡಿ, ಮೆಡಿಕಲ್ ಕಾಲೇಜುಗಳಲ್ಲಿಯೂ ಸಹ ದಾದಿಯರ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿಗಳು ಪ್ರಾಯೋಗಿಕ ತರಬೇತಿಯನ್ನು ಚೆನ್ನಾಗಿ ಅಧ್ಯಯನ ಮಾಡಬೇಕು. ಇದರಿಂದ ದಾದಿಯರ ಗುಣಮಟ್ಟ ಹೆಚ್ಚಾಗುತ್ತದೆ ಎಂದು ತಿಳಿಸಿದರು.


Spread the love

LEAVE A REPLY

Please enter your comment!
Please enter your name here