HomeBidarಯುವಶಕ್ತಿ ದೇಶದ ಬಲು ದೊಡ್ಡ ಆಸ್ತಿ: ರಂಭಾಪುರಿ ಶ್ರೀ

ಯುವಶಕ್ತಿ ದೇಶದ ಬಲು ದೊಡ್ಡ ಆಸ್ತಿ: ರಂಭಾಪುರಿ ಶ್ರೀ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಬಸವಕಲ್ಯಾಣ: ಉದಾತ್ತ ಜೀವನ ಮೌಲ್ಯಗಳನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ. ಪೂರ್ವಜರ ಅನುಭವದ ನುಡಿಗಳು ಯುವ ಜನಾಂಗಕ್ಕೆ ಅಮೂಲ್ಯ ಸಂಪತ್ತು. ಯುವಶಕ್ತಿ ದೇಶದ ಬಲು ದೊಡ್ಡ ಶಕ್ತಿ ಮತ್ತು ಆಸ್ತಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಮಂಗಳವಾರ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ 2ನೇ ದಿನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

ಮನುಷ್ಯನಲ್ಲಿರುವ ಅಸುರೀ ಗುಣಗಳು ನಾಶವಾಗಿ ದೈವಿ ಗುಣಗಳು ಬಲಗೊಳ್ಳಬೇಕು. ಜನ ಮನ ಜಾಗೃತಿಗೊಳಿಸಲು ಧರ್ಮ ಬೇಕು. ಗುರು ಮಾರ್ಗದರ್ಶನ ಪಡೆಯಲು ಭಾಗ್ಯ ಬೇಕು. ಮನುಷ್ಯನ ಬುದ್ಧಿ ವಿಕಾರಗೊಳ್ಳುವುದರ ಬದಲು ವಿಕಾಸಗೊಂಡರೆ ನಾಡು ನುಡಿ-ಸಂಸ್ಕೃತಿ ಪರಂಪರೆಗಳ ಬೆಳವಣಿಗೆ ಸಾಧ್ಯ. ಪ್ರಗತಿಪರವಾದ ಧ್ಯೇಯೋದ್ದೇಶಗಳು ಮಾನವನ ಶ್ರೇಯಸ್ಸಿಗೆ ದಾರಿದೀಪ ಎಂದರು.

ಯುವಜನಾಂಗಕ್ಕೆ ಆದರ್ಶ ಗುರಿ ಮತ್ತು ಧ್ಯೇಯವಿದ್ದರೆ ಜೀವನದಲ್ಲಿ ಶ್ರೇಯಸ್ಸು ಕಟ್ಟಿಟ್ಟ ಬುತ್ತಿ. ‘ರಂಭಾಪುರಿ ಯುವಸಿರಿ’ ಪ್ರಶಸ್ತಿ ಪುರಸ್ಕೃತರಾದ ಲಾಡವಂತಿ ಗ್ರಾಮದ ವಿಶ್ವಜಿತ ತಾತೇರಾವ ಢವಳೆಯವರ ಜೀವನವೇ ಇದಕ್ಕೊಂದು ನಿದರ್ಶನ. ಅವರ ಜೀವನದ ಸಾಧನೆ ಮತ್ತು ಪ್ರಯತ್ನ ಯುವ ಜನಾಂಗಕ್ಕೆ ಮಾದರಿ. ನವರಾತ್ರಿಯ ಎರಡನೇ ದಿನದಂದು ದೇವಿಯು ಬ್ರಹ್ಮಚಾರಿಣಿ ಸ್ವರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಬ್ರಹ್ಮಚಾರಿಣಿ ದೇವಿ ಆರಾಧನೆಯಿಂದ ಮನಸ್ಸು, ದೇಹ ಮತ್ತು ಇಂದ್ರಿಯಗಳ ಮೇಲೆ ಪ್ರಭುತ್ವ ಸಾಧಿಸುವ ಶಕ್ತಿ ಬರುತ್ತದೆ. ಕಷ್ಟಕಾಲದಲ್ಲಿ ಮಾನಸಿಕ ಸಮತೋಲನ ಮತ್ತು ಆತ್ಮವಿಶ್ವಾಸ ಉಳಿಸಿಕೊಳ್ಳಲು ನೆರವಾಗುತ್ತದೆ ಎಂದರು.

ಹುಡಗಿ ಸಂಸ್ಥಾನ ಹಿರೇಮಠದ ವಿರೂಪಾಕ್ಷ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಸಮ್ಮುಖ ವಹಿಸಿದ ಶ್ರೀನಿವಾಸ ಸರಡಗಿ ಡಾ. ರೇವಣಸಿದ್ಧ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಮನುಷ್ಯ ಅರಿತು ಬಾಳುವುದರಲ್ಲಿ ಸುಖ-ಶಾಂತಿಯಿದೆ. ಬದುಕಿನ ಉತ್ಕರ್ಷತೆ ಮತ್ತು ಶ್ರೇಯಸ್ಸಿಗೆ ಒಳ್ಳೆಯವರ ನೆರಳಿನಲ್ಲಿ ಬಾಳಿದರೆ ಜೀವನ ವಿಕಾಸಗೊಳ್ಳುವುದು ಎಂದರು.

ಬೀದರ ಲೋಕಸಭಾ ಕ್ಷೇತ್ರದ ಸಂಸದ ಸಾಗರ ಖಂಡ್ರೆ ಮಾತನಾಡಿ, ಶ್ರೀ ರಂಭಾಪುರಿ ಜಗದ್ಗುರುಗಳವರ ದಸರಾ ಧರ್ಮ ಸಮಾರಂಭ ಯುವಕರಿಗೆ ಮಾರ್ಗದರ್ಶನ ನೀಡುತ್ತ ಬಂದಿದೆ. ಯುವಕರೂ ಸಹ ಸಂಸ್ಕಾರವಂತರಾಗಬೇಕು. ಪ್ರತಿಯೊಬ್ಬರೂ ಸಹೋದರ ಭಾವದಿಂದ ಬಾಳಿದಾಗ ಸಮಾಜದಲ್ಲಿ ಸದ್ಭಾವನೆ ಬೆಳೆಯಲು ಸಾಧ್ಯವೆಂದರು.
ಮಾಜಿ ಎಮ್.ಎಲ್.ಸಿ ವಿಜಯಸಿಂಗ ಧರ್ಮಸಿಂಗ, ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ,

ಕೆ.ಪಿ.ಸಿ.ಸಿ ಸಹಕಾರ ವಿಭಾಗದ ಅಧ್ಯಕ್ಷ ಧನರಾಜ ತಾಳಂಪಳ್ಳಿ, ಬೀದರ ಕೆಪಿಸಿಸಿ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಸವಕಲ್ಯಾಣದ ಆನಂದ ದೇವಪ್ಪ, ಬಸವರಾಜ ಸ್ವಾಮಿ ವಿಶ್ವ ಡೆವಲಪರ್ಸ್, ಅರ್ಜುನ ಕನಕ, ಮನೋಹರ ಮೈಸೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಬಸವಕಲ್ಯಾಣ ವೀರಶೈವ ಸದ್ಬೋಧನಾ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ ಸ್ವಾಮಿ ಇವರಿಂದ ಸ್ವಾಗತ, ಬಸವಕಲ್ಯಾಣದ ಸ್ನೇಹ ಸರಡಗಿ ಇವರಿಂದ ಭರತನಾಟ್ಯ ಪ್ರದರ್ಶನ ಜರುಗಿತು. ಗುರುಲಿಂಗಯ್ಯ ಹಿತ್ತಲಶಿರೂರ ಮತ್ತು ರಾಜಶ್ರೀ ದಿಲೀಪಸ್ವಾಮಿ ಇವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ, ರಮೇಶ ರಾಜೋಳೆ ಶಿವಪೂರ ನಿರೂಪಿಸಿದರು. ಶ್ರೀ ಚನ್ನಬಸವೇಶ್ವರ ಹಿರೇಮಠ ಸಂಸ್ಥಾನ ಸುಕ್ಷೇತ್ರ ಹಾರಕೂಡ ಇವರಿಂದ ಅನ್ನದಾಸೋಹ ಜರುಗಿತು.

ಬೆಳಗುಂಪಾ ಹಿರೇಮಠದ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಅಜ್ಞಾನದಲ್ಲಿ ಮಲಗಿದ ಜನರನ್ನು ಎಚ್ಚರಿಸಲು ಕಾಲ ಕಾಲಕ್ಕೆ ಆಚಾರ್ಯರು, ಋಷಿಮುನಿಗಳು, ಶರಣ ಸಂತ ಮಹಂತರು ಅವತರಿಸಿ ಬಾಳಿಗೆ ಬೆಳಕು ತೋರಿದ್ದಾರೆ. ಸತ್ಯ ಶುದ್ಧವಾದ ಜೀವನ ಮೌಲ್ಯಗಳನ್ನು ಪರಿಪಾಲಿಸಿಕೊಂಡು ಯುವ ಜನಾಂಗ ಬೆಳೆದರೆ ಬೆಲೆ ಮತ್ತು ನೆಲೆ ಪ್ರಾಪ್ತವಾಗುತ್ತದೆ ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!