ಯುವಕರು ವಿವೇಕದೊಂದಿಗೆ ಸತ್ಪ್ರಜೆಗಳಾಗಿ: ಫಕೀರೇಶ್ವರ ಮಹಾಸ್ವಾಮಿಗಳು

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಸ್ವಾಮಿ ವಿವೇಕಾನಂದರು ಯುವ ಜನಾಂಗದ ಮನಸ್ಸಿನಲ್ಲಿ ಏಕತೆ, ಐಕ್ಯತೆ ಹಾಗೂ ವಿವೇಕವನ್ನು ತುಂಬುವ ಮೂಲಕ ಅವರಲ್ಲಿ ಭಾರತೀಯ ಸಂಸ್ಕೃತಿ ಸಂಸ್ಕಾರ ಮೂಡಿ ಬರುವಂತೆ ಪ್ರೇರಣೆ ನೀಡಿದವರು. ಯುವಕರು ವಿವೇಕಾನಂದರ ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ವಿವೇಕದೊಂದಿಗೆ ಸತ್ಪ್ರಜೆಗಳಾಗಿ ಬಾಳಬೇಕೆಂದು ಮಲ್ಲಸಮುದ್ರದ ಓಂಕಾರಗಿರಿಯ ಓಂಕಾರೇಶ್ವರ ಮಠದ ಪೂಜ್ಯ ಫಕೀರೇಶ್ವರ ಮಹಾಸ್ವಾಮಿಗಳು ಹೇಳಿದರು.

Advertisement

ಅವರು ಗದುಗಿನ ವಿವೇಕಾನಂದ ನಗರದ ಕಾಶೀ ವಿಶ್ವನಾಥ ದೇವಸ್ಥಾನದ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಭವನದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ `ಜೀವನ ದರ್ಶನ 53ನೇ ಮಾಲಿಕೆ, ಪಾಲಕಿ ಸೇವೆ ಮತ್ತು ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ವಿವೇಕ ಎಂದರೆ ಪ್ರಜ್ಞೆ, ಜ್ಞಾನ, ಬೆಳಕು ಎಂದು ಅರ್ಥೈಸಬಹುದು. ವಿವೇಕದ ಮೂಲಕ ಆನಂದವನ್ನು ಕಂಡುಕೊಳ್ಳುವುದೇ ವಿವೇಕಾನಂದ. ಜ್ಞಾನ ಬೆಳಕಿನ ವೇದಿಕೆಯಾದ ಇಲ್ಲಿ ಜೀವನದ ದರ್ಶನವನ್ನು ಮಾಡಲಾಗುತ್ತಿದೆ. ಮಠಾಧೀಶರು, ಜ್ಞಾನಿಗಳು, ಪಂಡಿತರು, ಉಪನ್ಯಾಸಕರನ್ನು ಆಮಂತ್ರಿಸಿ ಜೀವನಕ್ಕೆ ಬೇಕಾಗುವ ಜ್ಞಾನ ಸನ್ಮಾರ್ಗವನ್ನು ನೀಡುವ ‘ಜೀವನ ದರ್ಶನ’ ಮಾಲಿಕೆ ನಿರಂತರವಾಗಿ ಸಾಗಿಬರಲು ವಿವೇಕಾನಂದ ನಗರದ ಹಿರಿಯರು, ಸಮಿತಿಯ ಪದಾಧಿಕಾರಿಗಳು ಕಾರಣರಾಗಿದ್ದಾರೆ. ಸಮಾಜಮುಖಿ ಕಾರ್ಯ ಮಾಡುತ್ತಿರುವ ಈ ಸಮಿತಿಯ ಸರ್ವ ಪದಾಧಿಕಾರಿಗಳು ಅಭಿನಂದನಾರ್ಹರು ಎಂದರು.

ಹೆತ್ತ ತಂದೆ-ತಾಯಿ, ಹಿರಿಯರನ್ನು ಪ್ರೀತಿಸುವ, ಗೌರವಿಸುವ ಹಾಗೂ ಮಾರ್ಗದರ್ಶನ ಪಡೆದು ಕಾಯಕ, ದಾಸೋಹ ಮಾಡಬೇಕು ಎಂದ ಅವರು, ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕು. ಜೊತೆಗೆ ಒಳ್ಳೆಯ ಶಿಕ್ಷಣ ನೀಡಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎ.ಟಿ. ನರೇಗಲ್ ‘ಜೀವನ ದರ್ಶನ’ ಮಾಲಿಕೆಯ ಮುಖ್ಯ ಉದ್ದೇಶ ಜೀವನ ನಡೆಸುವ ಬಗೆ, ಸಾಧನೆಯ ಬಗೆ, ಸಂಸ್ಕಾರ, ಸಂಸ್ಕೃತಿಯನ್ನು ಯುವ ಜನಾಂಗಕ್ಕೆ ಪರಿಚಯಿಸಿ ಅವರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಹಿರಿದಾದ ಉದ್ದೇಶದೊಂದಿಗೆ ನಮ್ಮ ಸಮಿತಿ ಪ್ರತಿ ತಿಂಗಳು ಅಮವಾಸ್ಯೆ ದಿನ ಈ ಕಾರ್ಯಕ್ರಮವನ್ನು ನಿರಂತರವಾಗಿ ಮಾಡಿಕೊಂಡು ಬಂದಿದೆ. ಈ ಮಹತ್ಕಾರ್ಯಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಮನವಿ ಮಾಡಿಕೊಂಡರು.

ವೇದಿಕೆಯ ಮೇಲೆ ಸಮಿತಿಯ ಗೌರವಾಧ್ಯಕ್ಷ ಜಿ.ಜಿ. ಕುಲಕರ್ಣಿ, ಉಪಾಧ್ಯಕ್ಷ ಆರ್.ಆರ್. ಕಾಶಪ್ಪನವರ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕಾಶೀವಿಶ್ವನಾಥನ ಪಾಲಕಿ ಸೇವೆ ಮತ್ತು ಕಾರ್ತಿಕ ಮಾಸದ ದೀಪೋತ್ಸವವು ಸಕಲ ಸದ್ಭಕ್ತರಿಂದ ಶ್ರದ್ದಾಭಕ್ತಿಯೊಂದಿಗೆ ಜರುಗಿತು.

ಸವಿತಾ ಗುಡ್ಡದ, ಕಸ್ತೂರಿ ಕಮ್ಮಾರ ಮತ್ತು ಸಂಗಡಿಗರಿಂದ ಸುಮಧುರ ಸಂಗೀತ ಜರುಗಿತು. ಕಸ್ತೂರಿಬಾಯಿ ಕಮ್ಮಾರ, ವಿಶಾಲಾಕ್ಷೀ ಕಲ್ಲನಗೌಡರ ಪ್ರಾರ್ಥಿಸಿದರು. ಸಮಿತಿಯ ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ ಸ್ವಾಗತಿಸಿದರು. ವ್ಹಿ.ಕೆ. ಗುರುಮಠ ಪರಿಚಯಿಸಿದರು. ಕೋಶಾಧ್ಯಕ್ಷ ಎಸ್.ಎಸ್. ಪಾಳೇಗಾರ ನಿರೂಪಿಸಿದರು. ಸಂಗೀತಾ ಕುರಿ ವಂದಿಸಿದರು.

ಸಮಾರಂಭದಲ್ಲಿ ಸಮಿತಿಯ ನಿರ್ದೇಶಕರಾದ ಆರ್.ಬಿ. ಅಂದಪ್ಪನವರ, ವ್ಹಿ.ಆರ್. ಗೊಬ್ಬರಗುಂಪಿ, ಸಾಗರ ಬಿಂಗಿ, ರೇಣುಕಾ ಕರಿಗೌಡರ, ಸಂಗೀತಾ ಕುರಿ ಅಲ್ಲದೆ ಸಿ.ಕೆ. ಕಡಣಿ, ರಾಜೇಂದ್ರ ಗಡಾದ, ಎಸ್.ಎಸ್. ಪಾಟೀಲ, ಎಂ.ಬಿ. ಚನ್ನಪ್ಪಗೌಡ್ರ, ಕೆ.ಐ. ಕುರಗೋಡ, ವೀರಣ್ಣ ಕೊಟಗಿ, ಸುದರ್ಶನ ಹಾನಗಲ್ಲ, ಎಂ.ಕೆ. ತುಪ್ಪದ, ವ್ಹಿ.ಆರ್. ಗೊಬ್ಬರಗುಂಪಿ, ಬಿ.ಎಚ್. ಗರಡಿಮನಿ, ಎಂ.ಎನ್. ಕಾಮನಹಳ್ಳಿ, ಐ.ಬಿ. ಮೈದರಗಿ ಮುಂತಾದವರು ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಮಾತನಾಡಿ, ಮನುಷ್ಯ ಕಷ್ಟಪಟ್ಟು ದುಡಿಯಬೇಕು. ಪರಿಶ್ರಮದ ದುಡಿಮೆ ಫಲ ನೀಡುವುದು ನಿಶ್ಚಿತ. ದೂರದ ಪ್ರಯಾಣ ಸಣ್ಣ ಹೆಜ್ಜೆಯಿಂದ ಆರಂಭಗೊಳ್ಳುವ ಹಾಗೆ ಸಣ್ಣಪುಟ್ಟ ವ್ಯಾಪಾರ ಮಾಡುವ ಮೂಲಕ ವ್ಯಾಪಾರ ವಹಿವಾಟನ್ನು ಹೆಚ್ಚಿಸಿಕೊಳ್ಳುತ್ತ ಹೋಗಬೇಕು. ಆಳಾಗಿ ದುಡಿದು ಅರಸನಾಗಿ ಉಣ್ಣಬೇಕು ಎಂಬ ಹಿರಿಯರ ಮಾತಿನಂತೆ ಸಾಧನೆಗೆ ಪ್ರಯತ್ನ ಬೇಕು ಎಂದರು.


Spread the love

LEAVE A REPLY

Please enter your comment!
Please enter your name here