HomeCrime Newsಯುವಕನ ಸುಟ್ಟು ಕೊಲೆಗೈದಿದ್ದ ಪ್ರಕರಣ: 48 ಗಂಟೆಯಲ್ಲಿಯೇ ಮೂವರು ಆರೋಪಿಗಳ ಬಂಧನ- ಪೊಲೀಸರ ಮಿಂಚಿನ ಕಾರ್ಯಾಚರಣೆಗೆ...

ಯುವಕನ ಸುಟ್ಟು ಕೊಲೆಗೈದಿದ್ದ ಪ್ರಕರಣ: 48 ಗಂಟೆಯಲ್ಲಿಯೇ ಮೂವರು ಆರೋಪಿಗಳ ಬಂಧನ- ಪೊಲೀಸರ ಮಿಂಚಿನ ಕಾರ್ಯಾಚರಣೆಗೆ ಪ್ರಶಂಸೆ

For Dai;y Updates Join Our whatsapp Group

Spread the love

ಗದಗ: ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಕೇವಲ 48 ಗಂಟೆಗಳೊಳಗೆ ಭೇದಿಸಿ ಮೂವರು ಆರೋಪಿಗಳನ್ನು ಬಂಧಿಸುವ ಮೂಲಕ ಮಹತ್ವದ ಸಾಧನೆ ಮಾಡಿದ್ದಾರೆ.

ಮಾರ್ಚ್ 28ರಂದು ಹುಯಿಲಗೋಳ–ಹೊಂಬಳ ರಸ್ತೆಯ ಆಲಿ ಹಳ್ಳದ ಬ್ರಿಡ್ಜ್ ಕೆಳ ಭಾಗದಲ್ಲಿ ಸುಮಾರು 30ರಿಂದ 35 ವರ್ಷದ ಗಂಡಸಿನ ಅರ್ಧ ಸುಟ್ಟ, ಗುರುತಿಸಲಾಗದ ಶವ ಪತ್ತೆಯಾಗಿತ್ತು. ಶವದ ಸ್ಥಿತಿ ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುಡಿ ಪ್ರಕರಣ ಸಂಖ್ಯೆ 14/2026 ದಾಖಲಿಸಿಕೊಂಡು ತನಿಖೆ ಆರಂಭಿಸಲಾಯಿತು.

ತನಿಖೆ ಮುಂದುವರಿದಂತೆ ಹುಯಿಲಗೋಳ ಗ್ರಾಮದ ಬಸವರಾಜ ಕುರಿ ಅವರು ತಮ್ಮ ಮಗ ಚಂದ್ರು ಕುರಿ (28) ಮಾರ್ಚ್ 24ರಂದು ರಾತ್ರಿ ಮನೆಯಿಂದ ಹೊರಟು ಮರಳಿ ಬಾರದಿರುವ ಬಗ್ಗೆ ಮಾಹಿತಿ ನೀಡಿದರು. ನಂತರ ಕುಟುಂಬ ಸದಸ್ಯರು ಗದಗ ಜಿಲ್ಲಾ ಆಸ್ಪತ್ರೆಯ ಶವಗಾರದಲ್ಲಿ ಶವವನ್ನು ಗುರುತಿಸಿ ಅದು ಚಂದ್ರುವಿನದೇ ಎಂದು ದೃಢಪಡಿಸಿದರು. ಇದನ್ನಾಧರಿಸಿ ಪೊಲೀಸರು ಗುನ್ನಾ ಸಂಖ್ಯೆ 75/2026 ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದರು.

ಪ್ರಕರಣವನ್ನು ಶೀಘ್ರ ಪತ್ತೆ ಹಚ್ಚುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರ ಮಾರ್ಗದರ್ಶನದಲ್ಲಿ, ಹೆಚ್ಚುವರಿ ಎಸ್‌ಪಿ ಮಹಾಂತೇಶ ಸಜ್ಜನ ಹಾಗೂ ಡಿ.ಎಸ್.ಪಿ ಮುರ್ತಜಾ ಖಾದ್ರಿ ಅವರ ಮೇಲ್ವಿಚಾರಣೆಯಲ್ಲಿ, ಪಿಐ ಸಿದ್ದರಾಮೇಶ್ವರ ಗಡೇದ ಅವರ ನೇತೃತ್ವದಲ್ಲಿ ಪಿಎಸ್ಐಗಳಾದ ಎಸ್. ಬಿ ಕವಲೂರು, ವಿ. ಜಿ. ಪವಾರ, ಸಿಬ್ಬಂದಿಗಳಾದ ಪ್ರಕಾಶ್ ಗಾಣಿಗೇರ, ಎನ್. ಜಿ ಮಜ್ಜಗಿ, ಎಮ್. ಬಿ ವಡ್ಡಟ್ಟಿ, ಎಮ್. ಆಯ್ ಪಾಟೀಲ, ಖಾಜಾ ಮುಲ್ಲಾನವರ್, ಎಲ್. ಬಿ ಪೂಜಾರ, ತಾಂತ್ರಿಕ ವಿಭಾಗದ ಎಆರ್ ಎಸ್ ಐ ಗುರುರಾಜ ಬೂದಿಹಾಳ, ಎ.ಪಿ ದೊಡ್ಡಮನಿ, ಸಂಜಯ ಕೊರಡೂರು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಯಿತು.

ವಿಶೇಷ ತಂಡ ತಾಂತ್ರಿಕ ಮಾಹಿತಿ, ಕಾಲ್ ಡೀಟೈಲ್ಸ್ ಹಾಗೂ ಸ್ಥಳೀಯ ಮಾಹಿತಿಯನ್ನು ಆಧರಿಸಿ ಶಂಕಿತರ ಚಲನವಲನವನ್ನು ಪರಿಶೀಲನೆ ನಡೆಸಿ ಇಡೀ ಪ್ರಕರಣದ ಇಂಚಿಂಚೂ ಮಾಹಿತಿ ಕಲೆ ಹಾಕಿದರು.

ತನಿಖೆಯ ವೇಳೆ ಆರೋಪಿಗಳು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಅಡಗಿ ಕುಳಿತಿರುವುದು ಪತ್ತೆಯಾಗಿ, ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳಲಾಪೂರ ಗ್ರಾಮದ
ಈರಪ್ಪ ಹನುಮಂತಪ್ಪ ಕುದರಿ (34) ಹಾಗೂ ಪತ್ನಿ ರತ್ನಾ @ ರಾಮವ್ವ ಈರಪ್ಪ ಕುದರಿ (27) ಹಾಗೂ ಹುಯಿಲಗೋಳ ಗ್ರಾಮದ ಮಹಾಂತೇಶ ರಂಗಪ್ಪ ಹದ್ಲಿ (30)ಎಂದು ಗುರುತಿಸಲಾಗಿದೆ.

ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಂತೆ, ಮೃತ ಚಂದ್ರು ಕುರಿ ಆರೋಪಿತಳಾದ ರತ್ನಾಳೊಂದಿಗೆ ಕಳೆದ ನಾಲ್ಕು–ಐದು ವರ್ಷಗಳಿಂದ ಸಲುಗೆಯಿಂದಿದ್ದು, ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಲು ಒತ್ತಾಯಿಸುತ್ತಿದ್ದನು. ಈ ವಿಷಯಕ್ಕೆ ಸಂಬಂಧಿಸಿದಂತೆ ರತ್ನಾಳ ಪತಿ ಈರಪ್ಪ ಹಾಗೂ ಆಕೆಯ ಸಹೋದರ ಮಹಾಂತೇಶ ವಿಷಯ ಗೊತ್ತಾಗಿ ಅಸಮಾಧಾನಗೊಂಡಿದ್ದರು.

ಈ ಬಗ್ಗೆ ಚಂದ್ರುಗೆ ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಚಂದ್ರು ವರ್ತನೆ ಬದಲಾಯಿಸದ ಹಿನ್ನೆಲೆಯಲ್ಲಿ ಆರೋಪಿಗಳು ಕೊಲೆ ಮಾಡಲು ಸಂಚು ರೂಪಿಸಿದ್ದರು.

ಮಾರ್ಚ್ 24ರಂದು ಪೂರ್ವ ಯೋಜನೆಯಂತೆ ರತ್ನಾಳಿಂದ ಚಂದ್ರುವಿಗೆ ಕರೆ ಮಾಡಿಸಿ ಮನೆಗೆ ಬರಮಾಡಿಕೊಂಡು, ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಮನೆ ಸಮೀಪಕ್ಕೆ ಬಂದಾಗ ಮೊದಲು ಹಲ್ಲೆ ನಡೆಸಿ, ಬಳಿಕ ಬೈಕ್‌ನಲ್ಲಿ ಕೂರಿಸಿಕೊಂಡು ಆಲಿ ಹಳ್ಳದ ಬ್ರಿಡ್ಜ್ ಕೆಳಗೆ ಕರೆದೊಯ್ದು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಲಾಗಿದೆ. ನಂತರ ಶವವನ್ನು ಗುರುತಿಸಲು ಆಗದಂತೆ ಮಾಡಲು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾಕ್ಷಿ ನಾಶಪಡಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿಗಳಿಂದ ಕೊಲೆಗೈಯಲು ಬಳಸಿದ ಚಾಕು ಹಾಗೂ ಮೋಟಾರ್ ಸೈಕಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇವಲ 48 ಗಂಟೆಗಳೊಳಗೆ ಪ್ರಕರಣವನ್ನು ಭೇದಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ್ ಅವರು ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!