ಬೆಂಗಳೂರು:- ಯುವಕ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ಸ್ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರನ್ನು ಅಮಾನತು ಮಾಡಿ ನಗರ ಕಮಿಷನರ್ ಆದೇಶ ಹೊರಡಿಸಿದ್ದಾರೆ.
ಎಸ್, ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸ್ ಕಸ್ಟಡಿಯಲ್ಲಿ ತೀವ್ರವಾಗಿ ಹಲ್ಲೆಗೊಳಗಾಗಿ ಬಳಿಕ ರಿಹ್ಯಾಬ್ ಸೆಂಟರ್ ನಲ್ಲಿ ಮೃತಪಟ್ಟಿದ್ದ ದರ್ಶನ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿ ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ. ಕುಡಿದು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ದರ್ಶನ್ ಎಂಬ ಯುವಕನನ್ನು ಪೊಲೀಸರು ನವೆಂಬರ್15ರಂದು ಪೊಲೀಸ್ ಸ್ಟೇಷನ್‌ಗೆ ಕರೆತಂದಿದ್ದರು. ಈ ವೇಳೆ ಯಾವುದೇ ಕೇಸ್ ಮಾಡದೆ, ಎರಡು ದಿನ ಕಸ್ಟಡಿಯಲ್ಲಿಟ್ಟು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬಳಿಕ ದರ್ಶನ್ ತೀವ್ರ ಗಂಭೀರವಾದಾಗ ಆತನನ್ನು ನೆಲಮಂಗಲದ ರಿಹ್ಯಾಬ್ ದಾಖಲಿಸಿದ್ದಾರೆ. ಈ ವೇಳೆ ಆತ ಅಲ್ಲಿಯೇ ಮೃತಪಟ್ಟಿದ್ದ. ಇದೀಗ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರು ವಿವೇಕನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಶಿವಕುಮಾರ್ ಸೇರಿದಂತೆ ನಾಲ್ಕು ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಅಮಾನತಾಗಿರುವ ಇನ್ಸ್ ಪೆಕ್ಟರ್ ಶಿವಕುಮಾರ್ ಅವರ ಸ್ಥಾನಕ್ಕೆ ಸಿಸಿಬಿ ಇನ್ಸ್ ಪೆಕ್ಟರ್ ವಿರೇಶ್ ಅವರನ್ನು ವರ್ಗಾವಣೆ ಮಾಡಿದ್ದಾರೆ.


