ಅಸ್ಸಾಂ ಜನರ ಹೃದಯದ ಧ್ವನಿಯಾಗಿದ್ದ ಜುಬೀನ್ ಗರ್ಗ್ ನಿಧನ, ಕೇವಲ ಸೆಲೆಬ್ರಿಟಿ ಸಾವಲ್ಲ – ಅದು ಅಸ್ಸಾಂ ರಾಜ್ಯವನ್ನೇ ಶೋಕದಲ್ಲಿ ಮುಳುಗಿಸಿದ ಘಟನೆ. ಪುನೀತ್ ರಾಜ್ಕುಮಾರ್ ಅಗಲಿಕೆಯ ಬಳಿಕ ಕರ್ನಾಟಕದಲ್ಲಿ ಹೇಗೆ ಶೋಕಮಯ ವಾತಾವರಣ ನಿರ್ಮಾಣವಾಗಿತ್ತೋ, ಅದೇ ರೀತಿಯ ಭಾವನಾತ್ಮಕ ನಿರ್ವಾತ ಪರಿಸ್ಥಿತಿ ಜುಬೀನ್ ನಿಧನದ ನಂತರ ಅಸ್ಸಾಂನಲ್ಲಿ ನಿರ್ಮಾಣವಾಗಿತ್ತು.
ಆದರೆ ಜುಬೀನ್ ಸಾವು ಮೊದಲ ದಿನದಿಂದಲೇ ಅನುಮಾನಗಳಿಂದ ಆವರಿಸಿಕೊಂಡಿತ್ತು. ರಹಸ್ಯ, ಪ್ರಶ್ನೆಗಳು, ಸಂಶಯಗಳು – ಎಲ್ಲವೂ ಒಂದೊಂದಾಗಿ ಹೊರಬರುತ್ತಿದ್ದವು. ಇದೀಗ ಸಿಂಗಪುರ ಪೊಲೀಸ್ ತನಿಖೆಯ ಮೂಲಕ ಹಲವು ಅಂಶಗಳು ಬಹಿರಂಗಗೊಂಡಿವೆ.
ಘಟನೆ ನಡೆದಿದ್ದು ಸಿಂಗಪುರದ ಲಾಜುರಾಸ್ ದ್ವೀಪದ ಬಳಿ. ಜುಬೀನ್ ತಮ್ಮ ಮ್ಯಾನೇಜರ್ ಜೊತೆ ಬೋಟಿನಲ್ಲಿ ಪ್ರಯಾಣಿಸುತ್ತಿದ್ದರು. ನೀರಿಗೆ ಇಳಿಯುವ ಮೊದಲು ಅವರು ಲೈಫ್ ಜಾಕೆಟ್ ಹಾಕಿದ್ದರು. ಆದರೆ ಅದು ಅಸೌಕರ್ಯವಾಗಿದೆ ಎಂದು ಅದನ್ನು ತೆಗೆದರು. ಮತ್ತೊಂದು ಲೈಫ್ ಜಾಕೆಟ್ ಹಾಕುವಂತೆ ಹೇಳಿದರೂ ಅವರು ನಿರಾಕರಿಸಿದರು. ನಂತರ ನೀರಿಗೆ ಧುಮುಕಿ ಈಜಲು ಆರಂಭಿಸಿದರು.
ಆದರೆ ಕೆಲವೇ ನಿಮಿಷಗಳಲ್ಲಿ ಅವರ ದೇಹ ನೀರಿನ ಮೇಲೆ ಬೆನ್ನಿನ ಭಾಗ ಮೇಲಕ್ಕೆ ತೇಲಲು ಆರಂಭಿಸಿತು. ಗಾಬರಿಗೊಂಡ ಬೋಟಿನ ಸಿಬ್ಬಂದಿ ತಕ್ಷಣ ಅವರನ್ನು ಮೇಲಕ್ಕೆತ್ತಿ ಸಿಪಿಆರ್ ನೀಡಿದರು. ನಂತರ ಆಸ್ಪತ್ರೆಗೆ ದಾಖಲಿಸಿದರೂ, ಜೀವ ಉಳಿಸಲಾಗಲಿಲ್ಲ.
ಇಲ್ಲಿ ಬರುವ ದೊಡ್ಡ ಶಾಕ್ ಏನೆಂದರೆ – ಸಿಂಗಪುರ ಪೊಲೀಸರು ನೀಡಿದ ವರದಿ ಪ್ರಕಾರ, ಜುಬೀನ್ ನೀರಿಗೆ ಇಳಿಯುವ ಮುನ್ನ ಮದ್ಯ ಸೇವಿಸಿದ್ದರು. ರಕ್ತ ಪರೀಕ್ಷೆಯಲ್ಲಿ ಹೆಚ್ಚಿನ ಪ್ರಮಾಣದ ಆಲ್ಕೊಹಾಲ್ ಪತ್ತೆಯಾಗಿದೆ. ಜೊತೆಗೆ ಅವರಿಗೆ ಬಿಪಿ ಸಮಸ್ಯೆ ಮತ್ತು ಎಪಿಲೆಪ್ಸಿ ಎಂಬ ಆರೋಗ್ಯ ತೊಂದರೆ ಇದ್ದು, ಇವುಗಳ ಸಂಯೋಜನೆಯಿಂದಲೇ ಅವರು ಅಚಾನಕ ಸಾವನ್ನಪ್ಪಿರುವ ಸಾಧ್ಯತೆ ಹೆಚ್ಚು ಎಂದು ಪೊಲೀಸರು ಹೇಳಿದ್ದಾರೆ.
ಆದರೆ ಈ ವರದಿಯನ್ನು ಅಸ್ಸಾಂ ಸರ್ಕಾರ ಒಪ್ಪಿಕೊಳ್ಳಲು ಸಿದ್ಧವಿಲ್ಲ. ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ಮುಖ್ಯಮಂತ್ರಿ ಹಿಮಂತ್ ಬಿಸ್ವ ಶರ್ಮಾ, “ಇದು ಅಪಘಾತವಲ್ಲ, ಕೊಲೆ. ಸತ್ಯ ಹೊರತೆಗೆದೇ ತರುತ್ತೇವೆ” ಎಂದು ಬಹಿರಂಗವಾಗಿ ಹೇಳಿದ್ದಾರೆ.
ಇದರಿಂದಾಗಿ ಜನರಲ್ಲಿ ಮತ್ತಷ್ಟು ಅನುಮಾನ ಗಾಢವಾಗಿದೆ. ಸುಶಾಂತ್ ಸಿಂಗ್ ರಾಜ್ಪುತ್ ಸಾವನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡ ಮಾದರಿಯೇ ಈಗ ಜುಬೀನ್ ಗರ್ಗ್ ಪ್ರಕರಣದಲ್ಲೂ ನಡೆಯುತ್ತಿದೆಯೇ ಎಂಬ ಪ್ರಶ್ನೆ ತೀವ್ರವಾಗಿ ಕೇಳಿಬರುತ್ತಿದೆ.



