ವಿಜಯಸಾಕ್ಷಿ ಸುದ್ದಿ, ಮುಂಡರಗಿ
ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕು ಸೇರಿದಂತೆ ಹಲವಡೆ ತಡರಾತ್ರಿ ಸುರಿದ ಅಕಾಲಿಕ ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣ ನೆಲಕಚ್ಚಿದ್ದು, ಸೂಕ್ತ ಪರಿಹಾರ ನೀಡದ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಜಿಲ್ಲೆಯಾದ್ಯಂತ ಸುರಿದ ಮಳೆ ಸಾಕಷ್ಟು ಅವಾಂತರ ಸೃಷ್ಠಿಸಿದೆ. ಈ ವರುಣನ ಆರ್ಭಟಕ್ಕೆ ಬಿಳಿಜೋಳ, ಕಡಲೆ, ಗೋಧಿ, ಹತ್ತಿ ಬೆಳೆಗಳು ನೆಲಕ್ಕುರುಳಿ ನಾಶವಾಗಿವೆ. ಇನ್ನು ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳು ಮಳೆಗಾಳಿಗೆ ನೆಲಕ್ಕುರಿಳಿದ್ದು, ಧರೆಗುರುಳಿದ ಬೆಳೆ ಕಂಡು ರೈತ ಕಣ್ಣೀರು ಹಾಕುತ್ತಿದ್ದಾರೆ. ಈಗಾಗಲೇ ಕೆಲವು ಬೆಳೆ ಕಟಾವಿಗೆ ಬಂದಿದ್ದು, ಇನ್ನು ಕೆಲವು ಬೆಳೆ ಕಾಳುಕಚ್ಚುವ ಸಂದರ್ಭದಲ್ಲಿ ಜಮೀನಿನಲ್ಲಿ ನೀರು ನಿಂತು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಪ್ರಸಕ್ತ ಸಾಲಿನ ಮುಂಗಾರುನ ಹಂಗಾಮಿನಲ್ಲಾದ ಅತಿವೃಷ್ಠಿಯಿಂದ ಬೆಳೆಗಳೆಲ್ಲಾ ಹಾಳಾಗಿದ್ದವು. ಇದೀಗ ಹಿಂಗಾರು ಹಂಗಾಮಿನಲ್ಲೂ ಬೆಳೆಗಳು ಹಾನಿಗೊಳಗಾಗಿದ್ದು, ಸಾಲಸೂಲ ಮಾಡಿರುವ ರೈತರು ಮತ್ತಷ್ಟು ಆರ್ಥಿಕ ಸಂಕಷ್ಟಕೀಡಾಗಿದ್ದಾರೆ. ಅಲ್ಲದೇ, ಪ್ರಕೃತಿ ವಿಕೋಪದಿಂದಾಗಿ ಜಾನುವಾರುಗಳಿಗೆ ಮೇವು ಇಲ್ಲದೆ, ರೈತರ ಹೊಟ್ಟೆಗೆ ಹಿಟ್ಟು ಇಲ್ಲದೆ ಬದುಕುವುದು ದುಸ್ತರವಾಗುತ್ತಿದೆ.
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿಲ್ಲೂ ನೂರಾರು ಹೆಕ್ಟೆರ್ ಪ್ರದೇಶ ಹಾನಿಗೊಳಗಾಗಿದ್ದು, ಇನ್ನೂವರೆಗೂ ಪರಿಹಾರ ಬೆಳೆಗಳಿಗೆ ಸೂಕ್ತ ಪರಿಹಾರ ವಿತರಿಸಿಲ್ಲ. ಈಗಲೂ ಅಕಾಲಿಕ ಮಳೆಯಿಂದ ಆಹಾನಿಯಾಗಿದ್ದು, ಮುಂಗಾರು ಮತ್ತು ಮುಂಗಾರು ಮಳೆಯಿಂದಾಗಿರುವ ನಷ್ಟ ಭರಿಸಬೇಕು ಎಂದು ರೈತರು ಆಗ್ರಹಿಸಿದರು.
ಪದೇ ಪದೇ ಸಂಭವಿಸುತ್ತಿರುವ ಪ್ರಕೃತಿ ವಿಕೋಪದಿಂದಾಗಿ ಬೆಳೆ ನಾಶವಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ರೈತರ ಸಮಸ್ಯೆಗೆ ಸ್ಪಂದಿಸಿ, ಸೂಕ್ತ ಪರಿಹಾರ ನೀಡಬೇಕು.
ಶಂಕರ್ಗೌಡ್ರ ಎಂ.ಜಯನಗೌಡ್ರ, ರೈತ