ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಲ್ಕತ್ತಾ
ರಾಜಕೀಯ ನಾಯಕರು ನಾಲಿಗೆ ಹರಿ ಬಿಡುತ್ತಿರುವುದೇನೂ ಇತ್ತೀಚಿನ ದಿನಗಳಲ್ಲಿ ಹೊಸತೇನಲ್ಲ. ರಾಜಕಾರಣಿಗಳು, ಅಧಿಕಾರಿಗಳು ಸೇರಿದಂತೆ ಹಲವರ ವಿರುದ್ಧ ಆಗಾಗ್ಗೆ ಕುಹಕವಾಗಿ ಮಾತನಾಡುತ್ತಲೇ ಇರುತ್ತಾರೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿರುವ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಆಡಳಿತದ ಬಗ್ಗೆ ಬಿಜೆಪಿ ನಾಯಕರು ಹರಿಹಾಯುತ್ತಲೇ ಇದ್ದಾರೆ. ಇಲ್ಲಿ ಗೂಂಡಾಗಿರಿ ಆಡಳಿತವಿದೆ ಎಂದು ಆರೋಪಿಸುತ್ತಲೇ ಬರುತ್ತಿರುವುದು ಹೊಸತಲ್ಲ.
ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಗೂಂಡಾಗಿರಿ ಆಡಳಿತ ಜಾರಿಯಲ್ಲಿದೆ. ಪೊಲೀಸರು ಕೈಕಟ್ಟಿ ಕುಳಿತಿದ್ದು, ಬಿಜೆಪಿ ಅಧಿಕಾರಕ್ಕೆ ಬಂದ್ರೆ ಬೂಟು ನೆಕ್ಕಿಸುತ್ತೇವೆಂದು ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ರಾಜು ಬ್ಯಾನರ್ಜಿ ನಿನ್ನೆ ನಡೆದ ದುರ್ಗಾಪುರದ ಸಮಾವೇಶದಲ್ಲಿ ಮಾತನಾಡಿರುವ ವಿವಾದಾತ್ಮಕ ಹೇಳಿಕೆ ನ್ಯೂಸ್ 18 ಕನ್ನಡದಲ್ಲಿ ವರದಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಏನಾಗುತ್ತದೆ ನೋಡಿ. ಗೂಂಡಾಡಳಿತ ನಡೆಯುತ್ತಿದ್ದರೂ ಪೊಲೀಸರು ಸುಮ್ಮನಿದ್ದಾರೆ. ಇಂತವರನ್ನ ಏನ್ಮಾಡ್ಬೇಕು ಹೇಳಿ. ಅವರಿಗೆ ನಾವು ಬೂಟು ನೆಕ್ಕುವ ಕೆಲಸ ನೀಡುತ್ತೇವೆಂದು ಬಿಜೆಪಿ ನಾಯಕ ರಾಜು ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ 2021ರಲ್ಲಿ ನಡೆಯುವ ಹಿನ್ನೆಲೆಯಲ್ಲಿ ಟಿಎಂಸಿ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಪಕ್ಷ ಸಂಘಟನೆ ಹಾಗೂ ಪ್ರಚಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ.