ವಿಜಯಸಾಕ್ಷಿ ಸುದ್ದಿ, ಗದಗ
ಒಂದೇ ದಿನದಲ್ಲಿ ಅಭ್ಯರ್ಥಿಯ ನಾಮಪತ್ರದ ಕ್ರಮ ಸಂಖ್ಯೆ ಅದಲು ಬದಲು ಮಾಡುವ ಮೂಲಕ ಚುನಾವಣಾಧಿಕಾರಿಗಳು ಅಭ್ಯರ್ಥಿಗೆ ಗೊಂದಲವುಂಟು ಮಾಡಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯ ಎರಡನೇಯ ಹಂತದಲ್ಲಿ ನಡೆಯುವ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮ ಪಂಚಾಯತಿಯಲ್ಲಿ ಈ ಎಡವಟ್ಟು ನಡೆದಿದೆ.
ಬನಹಟ್ಟಿ ಗ್ರಾ.ಪಂ.ನ ಮೂಗನೂರು ಮತಕ್ಷೇತ್ರಕ್ಕೆ ವೀರನಗೌಡ ಶಿವನಗೌಡ ಮೂಗನೂರ ಎಂಬ ವ್ಯಕ್ತಿ ಸ್ಪರ್ಧಿಸಿದ್ದಾರೆ. ಇವರಿಗೆ ಮೊದಲು ಕ್ರಮ ಸಂಖ್ಯೆ 06 ನೀಡಿದ್ದ ಚುನಾವಣಾ ಅಧಿಕಾರಿಗಳು,
ಮರುದಿನ ಬೆಳಿಗ್ಗೆ ಕ್ರ.ಸಂ. 04 ನೀಡಿದ್ದಾರೆ ಇದರಿಂದ ಅಭ್ಯರ್ಥಿ ಗೊಂದಲಕ್ಕೀಡಾಗಿದ್ದಾರೆ.
ಅಭ್ಯರ್ಥಿ ವೀರನಗೌಡ ಅವರು ಮೊದಲು ನೀಡಿದ ಸಂಖ್ಯೆಯನ್ನೇ ನಮೂದಿಸಿ ಕರಪತ್ರ ಮುದ್ರಿಸಿದ್ದಾರೆ. ಈಗಾಗಲೇ ಮುದ್ರಿಸಿರುವ ಕರಪತ್ರಗಳನ್ನು ಪ್ರಚಾರ ಮಾಡುವ ಮೂಲಕ ಹಂಚಿದ್ದಾರೆ. ಇದೀಗ ಕ್ರಮ ಸಂಖ್ಯೆ ಅದಲು ಬದಲು ಮಾಡಿದ್ದಾರೆ.
ಕ್ರಮ ಸಂಖ್ಯೆ ಬದಲಾವಣೆಗೆ ಕಾರಣ ಕೇಳಿದರೆ ಚುನಾವಣಾಧಿಕಾರಿಗಳು ಮೇಲಾಧಿಕಾರಿಗಳತ್ತ ಬೊಟ್ಟು ಮಾಡಿ ತೋರಿಸಿತ್ತಿದ್ದಾರೆ ಎಂದು ವೀರನಗೌಡ ಆರೋಪಿಸಿದ್ದಾರೆ.
ಅಧಿಕಾರಿಗಳ ಎಡವಟ್ಟಿನಿಂದಲೋ ಅಥವಾ ತಪ್ಪಿನಿಂದಲೋ ಈಗಾಗಲೇ ಮೊದಲ ಕ್ರಮ ಸಂಖ್ಯೆಯಲ್ಲೇ ಪ್ರಚಾರ ಮಾಡಿರುವ ಗ್ರಾ.ಪಂ.ಚುನಾವಣಾ ಅಭ್ಯರ್ಥಿ ವೀರನಗೌಡ ಶಿವನಗೌಡ ಮೂಗನೂರ ಗೊಂದಲದಲ್ಲಿರುವುದಂತೂ ಸುಳ್ಳಲ್ಲ.