ವಿಜಯಸಾಕ್ಷಿ ಸುದ್ದಿ ಗದಗ:
ಅಪಘಾತ ತಡೆಗಟ್ಟಲು ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ಸಂಭವಿಸಬಹುದಾದ ಜೀವಹಾನಿ ತಪ್ಪಿಸಬಹುದು. ಜಿಲ್ಲೆಯ ಅಪಘಾತ ವಲಯಗಳ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಗತಿಯಲ್ಲಿರುವ ನಗರ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಬಸ್ ನಿಲ್ದಾಣದ ಹತ್ತಿರ ಪ್ರಗತಿಯಲ್ಲಿರುವ ಕಾಮಗಾರಿ ಹಾಗೂ ರಾಧಾಕೃಷ್ಣ ನಗರದಿಂದ ಕೊಪ್ಪಳ ರಿಂಗ್ ರಸ್ತೆವರೆಗಿನ ಚತುಷ್ಪಥ ರಸ್ತೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಅಲ್ಲದೇ ರಸ್ತೆ ಮಧ್ಯೆ ಡಿವೈಡರ್ ನಿರ್ಮಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದರು.
ರಸ್ತೆ ಡಾಂಬರೀಕರಣ ಅಥವಾ ಕಾಂಕ್ರಿಟೀಕರಣ ಮಾಡುವ ಸಂದರ್ಭದಲ್ಲಿ ಅವಶ್ಯಕತೆ ಇರುವಲ್ಲಿ ಮಾತ್ರ ಹಂಪ್ಸ್ ಹಾಕಬೇಕು. ಟ್ರಾಫಿಕ್ ನಿಯಮಗಳಿರುವ ಪ್ರತಿಫಲಿತ ಫಲಕಗಳನ್ನು ಅಳವಡಿಸಬೇಕು. ರಸ್ತೆ ಮೇಲೆ ಮಣ್ಣು ಗುಡ್ಡೆಗಳು ಇರದಂತೆ ಕ್ರಮ ಕೈಗೊಂಡು ರಸ್ತೆಯ ಮೇಲಿರುವ ಮಣ್ಣು ಸ್ವಚ್ಛಗೊಳಿಸಬೇಕು. ರಸ್ತೆಯಲ್ಲೆಲ್ಲ ಗುಂಡಿಗಳು ಬಿದ್ದಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ. ಗುಂಡಿಗಳನ್ನು ಮುಚ್ಚುವ ಮೂಲಕ ಅಪಘಾತಗಳನ್ನು ತಡೆಗಟ್ಟಬೇಕು ಎಂದರು.
ನಗರ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ವಾಹನ ನಿಲುಗಡೆ ಗುರುತಿಸಬೇಕು. ನಿಗದಿತ ನಿಲ್ದಾಣಗಳಲ್ಲಿ ಬಸ್ ನಿಲ್ಲಿಸಬೇಕು. ಇನ್ನುಳಿದ ವಾಹನ ಸವಾರರಿಗೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಅಗತ್ಯವಿರುವ ಕಡೆಗಳಲ್ಲಿ ಸಂಚಾರ ದೀಪಗಳ ಅಳವಡಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಪಂ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಸ್.ಎನ್. ರುದ್ರೇಶ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ ಕಾಟೋಕರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಪಘಾತ ವಲಯ ಕಾಮಗಾರಿ ಪೂರ್ಣಗೊಳಿಸಿ
Advertisement