ವಿಜಯಸಾಕ್ಷಿ ಸುದ್ದಿ, ಗದಗ:
ರಾಜ್ಯ ಸರ್ಕಾರದ ವಿರುದ್ಧ ಅಲೆ ಎದ್ದಿದೆ, ಇದರಲ್ಲಿ ಸರ್ಕಾರ ಕೊಚ್ಚಿಕೊಂಡು ಹೋಗುತ್ತದೆ ಎಂದು ಸಿದ್ರಾಮಯ್ಯ ಹೇಳುತ್ತಿದ್ದು, ಅಲೆ, ಬಿರುಗಾಳಿ, ಸುನಾಮಿ ಎಂಬ ಶಬ್ದಗಳು ಕಾಂಗ್ರೆಸ್ ಪಕ್ಷಕ್ಕೆ ಸೇರಿವೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.
ಇಂದು ಗದಗ ನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, 2023ರ ವಿಧಾನಸಭಾ ಚುನಾವಣೆವರೆಗೂ ಕಾಯಬೇಕಿಲ್ಲ. ಅವರು ಹೇಳಿದಂತೆ, ಸದ್ಯ ನಡೆಯುತ್ತಿರುವ ಎಂಎಲ್ಸಿ ಚುನಾವಣೆಯಲ್ಲಿ ಸೋಲುನ್ನುವ ಮೂಲಕ ಅಲೆ, ಬಿರುಗಾಳಿ, ಸುನಾಮಿಯಲ್ಲಿ ಕಾಂಗ್ರೆಸ್ ಕೊಚ್ಚಿಕೊಂಡು ಹೋಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಮಾಜಿ ಸಿಎಂ ಸಿದ್ರಾಮಯ್ಯ ಬೂಟಾಟಿಕೆ ನಡೆಸುತ್ತಿದ್ದು, ಅವರ ನಡೆ ನುಡಿ ನೋಡಿದರೆ ಹೊಸ ಟ್ರೆಂಡ್ ಆರಂಭಿಸಿದ್ದಾರೆ. ಅವರು ಹಾವಾಡಿಗರಂತೆ ಮಾತನಾಡುತ್ತಿದ್ದಾರೆ ಎಂದ ಅವರು, ಸಿದ್ರಾಮಯ್ಯ ಅವರ ನಾಯಕತ್ವವನ್ನು ಸ್ವಪಕ್ಷದವರೇ ಸ್ವೀಕರಿಸಲು ತಯಾರಿಲ್ಲ. ನಿನ್ನೆ ಯಾವುದೋ ಒಂದು ಕಾಂಗ್ರೆಸ್ ಸಮಾರಂಭದಲ್ಲಿ ಜಮೀರ್ ಅಹ್ಮದ್ ಗೆ ಜೈಕಾರ ಹಾಕಿದ್ದಕ್ಕೆ ಮಾಜಿ ಸಿಎಂ ಸಿದ್ರಾಮಯ್ಯ ಅವರು ತಮ್ಮ ಭಾಷಣ ಮೊಟಕುಗೊಳಿಸಬೇಕಾಯಿತು. ಹೀಗಾಗಿ ಅವರಲ್ಲಿಯೇ ಹೊಂದಾಣಿಕೆ ಇಲ್ಲ. ಸಿದ್ರಾಮಯ್ಯ, ಡಿಕೆಶಿ, ಪರಮೇಶ್ವರ ಎಂಬ ಮೂರು ಬಣಗಳಿದ್ದು, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯದ 25 ವಿಧಾನ ಪರಿಷತ್ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಜನಸ್ವರಾಜ್ ಯಾತ್ರೆ ಮೂಲಕ ಬಿಜೆಪಿ ನಾಲ್ಕು ತಂಡಗಳಾಗಿ ಪ್ರಚಾರ ನಡೆಸಲಿದೆ. ಇಂದು ಮಾಜಿ ಸಿಎಂ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಯಲ್ಲಾಪುರದಿಂದ, ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕೊಪ್ಪಳದಿಂದ ಪ್ರಚಾರ ಕಾರ್ಯ ಆರಂಭಿಸಲಾಗುತ್ತಿದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಬಿಟ್ ಕಾಯಿನ್ ಪ್ರಕರಣವನ್ನು ಸಿಬಿಐ, ಇಡಿಗೆ, ಎನ್ಪೋರ್ಸ್ ಮೆಂಟ್ ಗೆ ಕೊಡಬೇಕೋ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಇದಕ್ಕೆ ಸರ್ಕಾರವೂ ಒಪ್ಪಿಗೆ ನೀಡಲಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಕರ್ ನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಎಷ್ಟೇ ದೊಡ್ಡ ವ್ಯಕ್ತಿಗಳಿದ್ದರೂ ಅವರಿಗೆ ತಕ್ಕ ಶಾಸ್ತಿ ಆಗಲಿದೆ. ತಪ್ಪಿತಸ್ಥರು ಪಾತಾಳದಲ್ಲಿ ಅಡಗಿದ್ದರೂ ಅಂತವರನ್ನು ಕರೆ ತರುವ ಶಕ್ತಿ ಸರ್ಕಾರಕ್ಕೆ ಇದೆ.
ಆದ್ರೆ, ಕಾಂಗ್ರೆಸ್ ನಾಯಕರು ಇದನ್ನು ಹೇಳಲು ತಯಾರಿಲ್ಲ. ಬಿಟ್ ಕಾಯಿನ್ ವಿಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಸಿದ್ರಾಮಯ್ಯ ಅವರು ಬಿಡುಗಡೆ ಮಾಡಬೇಕು. ವಿನಾಕಾರಣ ಬಿಜೆಪಿ ಮೇಲೆ ಆರೋಪ ಹೊರಿಸುವುದು ಸರಿಯಲ್ಲ. ಕಾಂಗ್ರೆಸ್ ಬಿಜೆಪಿ ಮೇಲೆ ಕೆಸರೆರಚಲು ಮುಂದಾಗುತ್ತಿದೆ. ಮಾಜಿ ಸಿಎಂ ಬಳಕೆ ಮಾಡದ ಪದಗಳನ್ನು ಸಿದ್ರಾಮಯ್ಯ ಬಳಸುತ್ತಿದ್ದಾರೆ. ಕಾಂಗ್ರೆಸ್ ನವರು ಸತ್ಯಕ್ಕೆ ದೂರವಾದದ್ದನ್ನೇ ಮಾತನಾಡುತ್ತಿದ್ದು, ಕಾಂಗ್ರೆಸ್ ವೊಂದು ಸುಳ್ಳಿನ ಪ್ಯಾಕ್ಟರಿ ಇದ್ದಂತೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಎಸ್ ಎಚ್ ಶಿವನಗೌಡರ ಉಪಸ್ಥಿತರಿದ್ದರು.