ವಿಜಯಸಾಕ್ಷಿ ಸುದ್ದಿ, ಕಾರವಾರ: ಸಮುದ್ರದಲ್ಲಿ ಈಜಾಡುತ್ತಿದ್ದಾಗ ಅಲೆಗಳಿಗೆ ಸಿಕ್ಕಿ ಕೊಚ್ಚಿ ಹೋಗಿದ್ದ ಐವರ ಪೈಕಿ ಮೂವರು ಸಾವನ್ನಪ್ಪಿ ಇಬ್ಬರನ್ನು ರಕ್ಷಣೆ ಮಾಡಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ನಡೆದಿದೆ.
ಇಲ್ಲಿನ ಮುಖ್ಯ ಕಡಲತೀರದಲ್ಲಿ ಈಜಲು ತೆರಳಿದ್ದ 21 ವರ್ಷದ ಸುಮಾ, 20 ವರ್ಷದ ತಿಪ್ಪೇಶ ನಾಯಕ್ ಮತ್ತು 35 ವರ್ಷದ ರವಿ ಮೃತಪಟ್ಟಿದ್ದಾರೆ. ಇನ್ನಿಬ್ಬರನ್ನು ರಕ್ಷಣೆ ಮಾಡಿದ್ದು ಅಸ್ವಸ್ತಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತಪಟ್ಟವರು ಬೆಂಗಳೂರಿನ ಹೆಬ್ಬಗೋಡಿಯವರಾಗಿದ್ದು ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದವರಾಗಿದ್ದಾರೆ. ಸ್ನೇಹಿತರೊಂದಿಗೆ ಗೋಕರ್ಣಕ್ಕೆ ಪ್ರವಾಸಕ್ಕೆಂದು ಆಗಮಿಸಿದ್ದು ಈ ವೇಳೆ ಸಮುದ್ರದಲ್ಲಿ ಈಜುತ್ತಿದ್ದಾಗ ಒಮ್ಮೆಲೇ ಬಂದ ಅಲೆಗೆ ಈ ಐವರೂ ಕೊಚ್ಚಿಹೋಗಿದ್ದರು.
ತಕ್ಷಣ ಅಲ್ಲಿಯೇ ಇದ್ದ ಬೋಟಿಂಗ್ ಚಟುವಟಿಕೆ ನಡೆಸುವ ಸಿಬ್ಬಂದಿ ರಕ್ಷಣೆಗೆ ಧಾವಿಸಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಮತ್ತೆ ಮೂವರನ್ನ ದಡಕ್ಕೆ ತಂದರಾದರೂ ಅಷ್ಟರಲ್ಲಾಗಲೇ, ಅವರು ಪ್ರಾಣಬಿಟ್ಟಿದ್ದರು. ಮೂವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.