ದುಡಿಯುವ ವರ್ಗ ಹಸಿವಿನಿಂದ ಕಂಗಾಲು
ವಿಜಯಸಾಕ್ಷಿ ಸುದ್ದಿ, ಗದಗ
ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜನರ ಜೀವ ಉಳಿಸಲು ದುಡಿಯುತ್ತಿರುವ ಅಸಂಘಟಿತ ವರ್ಗಕ್ಕೆ ಸರ್ಕಾರ ಪ್ಯಾಕೇಜ್ ಘೋಷಿಸಬೇಕು ಜೈ ಭೀಮ ಸೇನಾ ರಾಜ್ಯ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ಮೈಲಾರಪ್ಪ ಚಳಮರದ ಒತ್ತಾಯಿಸಿದ್ದಾರೆ.
ಕೊರೊನಾ ಎರಡನೇ ಅಲೆ ಅಪಾಯಕಾರಿಯಾಗಿದೆ. ಹಳ್ಳಿ ಹಳ್ಳಿಗೂ ಸೋಂಕು ವ್ಯಾಪಿಸಿದೆ. ಸಾವು, ನೋವು ನಿತ್ಯ ನಡೆಯುತ್ತಿವೆ. ಸೋಂಕು ನಿಯಂತ್ರಿಸಲು ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದೆ. ದುಡಿಯುವ ವರ್ಗ ಹಸಿವಿನಿಂದ ಕಂಗಾಲಾಗಿದೆ. ಸರ್ಕಾರ ಕೂಡಲೇ ದುಡಿಯುವ ವರ್ಗಕ್ಕೆ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಟಿ.ವಿಗಳಲ್ಲಿ ಪ್ರಸಾರವಾಗುವ ಸಾವು, ನೋವು, ಶವ ಸುಡುವ ದೃಶ್ಯ ನೋಡುತ್ತಿರುವ ಸಾರ್ವಜನಿಕರು ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಜ್ವರ, ಕೆಮ್ಮು, ನೆಗಡಿ, ಸುಸ್ತು ಕಾಣಿಸಿಕೊಂಡರೂ ಮೆಡಿಕಲ್ ಸ್ಟೋರ್ಗಳಲ್ಲಿ ಮಾತ್ರೆ ನುಂಗಿ ಮನೆಯಲ್ಲಿ ಉಳಿದು ಸೋಂಕು ಹಬ್ಬಿಸುತ್ತಿರುವ ಘಟನೆಗಳು ನಡೆಯುತ್ತಿವೆ ಎಂದರು.
ಕೊರೊನಾ ಸೇನಾನಿಗಳು ಪಟ್ಟಣದಲ್ಲಿ ಕೂರದೆ ಹಳ್ಳಿ, ಹಳ್ಳಿ ಸುತ್ತಿ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಬೇಕಿದೆ. ಫ್ಯಾಕ್ಟರಿಗಳಲ್ಲಿ ದುಡಿಯುತ್ತಿದ್ದ ಅಸಂಘಟಿತ ಕಾರ್ಮಿಕರು, ಕೊರೊನಾ ಕಂಟಕದಿಂದ ಪಾರಾಗಲು ಗ್ರಾಮೀಣ ಪ್ರದೇಶಕ್ಕೆ ಬಂದಿದ್ದಾರೆ. ಅಸಂಘಟಿತ ಕಾರ್ಮಿಕರಿಗೆ ಅನ್ನಕ್ಕೆ ಮಾರ್ಗ ಮಾಡಬೇಕಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಭೂರಹಿತ ಕೂಲಿಕಾರರ ಸ್ಥಿತಿ, ತೀರಾ ಸಂಕಟಕ್ಕೆ ಸಿಲುಕಿದೆ. ಪ್ಯಾಕೇಜ್ ನೀಡುವ ಮೂಲಕ ಅನ್ನದ ಮಾರ್ಗ ತೋರಿಸಲು ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದರು.