ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಇತ್ತೀಚೆಗೆ ಆನ್ಲೈನ್ ಗೇಮ್ಗಳೆಂಬ ಹೊಸ ಅವತಾರದಲ್ಲಿ ವಯಸ್ಸಿನ ಹಂಗಿಲ್ಲದೆ ಜನರು ಜೂಜಾಟದ ದಾಸರಾಗುತ್ತಿರುವುದು ತೀವ್ರ ಆತಂತಕ್ಕೆ ಕಾರಣವಾಗಿದೆ. ಇವುಗಳನ್ನು ನಿಷೇಧಿಸಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಆತಂಕ ವ್ಯಕ್ತಪಡಿಸಿದರು. ಅವರು ಆನ್ಲೈನ್ ಸ್ಕಿಲ್ ಗೇಮ್ ಜೂಜಾಟಗಳನ್ನು ರಾಜ್ಯದಲ್ಲಿ ನಿಷೇಧಿಸುವಂತೆ ಒತ್ತಾಯಿಸಿ ಸೋಮವಾರ ಗಂಗಾವತಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಆನ್ಲೈನ್ ಗೇಮ್ ಹೆಸರಿನಲ್ಲಿ ರೂಪಾಂತರಗೊಂಡು ಜನರನ್ನು ಆಕರ್ಷಿಸಲಾಗುತ್ತಿದೆ.
ಬರೀ 25ರಿಂದ 50 ರೂ. ಬಂಡವಾಳ ಹಾಕಿ ಕೋಟಿ ಕೋಟಿ ಹಣ ಗೆಲ್ಲಬಹುದೆಂಬ ಆಮಿಷವೊಡ್ಡಿ ಯುವಕರ ದಾರಿ ತಪ್ಪಿಸುವಂತಹ ರಮ್ಮಿ ಸರ್ಕಲ್, ಡ್ರೀಮ್-11, ಎಂ-11 ಸರ್ಕಲ್, ಗೇಮ್ ಜಿ, ಮಿಲಿಯನ್ ಫೆಸ್ಟ್, ಪ್ರೀಮಿಯರ್ ಲೀಗ್, ಪೋಕರಿಬಾಜಿ, ರಮ್ಮಿ ಬಾಜಿ, ರಮ್ಮಿ ಗುರು, ಜಂಗ್ಲಿ ರಮ್ಮಿ, ವಿನ್ ರಮ್ಮಿ, ರಮ್ಮಿ ಕಲ್ಚರ್, ಮೈಟೀಮ್ 11 ಸರ್ಕಲ್, ಫ್ಯಾನ್ ಫ್ಯಾಂಟಸಿ, ಪೇಟಿಎಂ ಫಸ್ಟ್ ಗೇಮ್ ಮುಂತಾದ ನೂರಾರು ಆನ್ಲೈನ್ ಗೇಮ್ ಆಪ್ಗಳು ಸ್ಕಿಲ್ ಗೇಮ್ (ಕೌಶಲ್ಯ ಆಟ) ಹೆಸರಲ್ಲಿ ಜೂಜಾಡಿಸಿ, ಸಾವಿರಾರು ಕುಟುಂಬಗಳನ್ನು ಬೀದಿಗೆ ತರುತ್ತಿವೆ.
ಕ್ರಿಕೆಟ್ ಮತ್ತು ಜೂಜು ಪ್ರೇಮಿಗಳನ್ನೇ ಗುರಿಯಾಗಿಸಿಕೊಂಡು ಆನ್ಲೈನ್ ಆಪ್ಗಳನ್ನು ರೂಪಿಸಲಾಗುತ್ತಿದೆ. ಈ ಆಪ್ಗಳ ನಿಯಂತ್ರಣಕ್ಕೆ ಕಾನೂನಿನ ಅಗತ್ಯವಿದೆ ಎಂದು ಮದ್ರಾಸ್ ಹೈಕೋರ್ಟಿನ ಮಧುರೈ ಪೀಠ ಇತ್ತೀಚೆಗೆ ಅಭಿಪ್ರಾಯಿಸಿದ್ದು ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ ಎಂದರು.
ಇಂತಹ ಆನ್ಲೈನ್ ಗೇಮ್ಗಳಿಗೆ ಕೃಷಿಕರು, ವಿದ್ಯಾವಂತ ನಿರುದ್ಯೋಗಿಗಳು, ಸಣ್ಣಪುಟ್ಟ ವ್ಯಾಪಾರಿಗಳ ಹೆಸರಿನಲ್ಲಿ ಜಾಹೀರಾತು ವಿಡಿಯೋ ಮಾಡಿ ಪ್ರಕಟಿಸಲಾಗುತ್ತಿದೆ. ಸರ್ಕಾರ ಇಂತಹ ಆನ್ಲೈನ್ ಗೇಮ್ ಆಪ್ಗಳನ್ನು ನಿ?ಧಿಸಿ, ಯುವಕರು ಜೂಜಾಟಕ್ಕೆ ಬಲಿಯಾಗುವುದನ್ನು ತಪ್ಪಿಸಬೇಕು ಎಂದು ಮನವಿ ಮಾಡಿದರು.
ಕರವೇ ಪದಾಧಿಕಾರಿಗಳಾದ ಭರಮಪ್ಪ, ಶಂಕರ ಪೂಜಾರಿ, ಹುಸೇನಸಾಬ್, ಉಮೇಶ, ಅಮ್ಜಾದ್, ಈರಣ್ಣ, ಜಿಲಾನ್ ಸಾಬ್, ಹಸೇನಸಾಬ್ ಮುದುಗಲ್ ಉಪಸ್ಥಿತರಿದ್ದರು.
ಆನ್ಲೈನ್ ಸ್ಕಿಲ್ ಗೇಮ್ಗಳನ್ನು ನಿಷೇಧಿಸಿ
Advertisement