ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: ಇಂದಿನಿಂದ 18 ದಿನಗಳ ಅವಧಿಯ ಮುಂಗಾರು ಸಂಸತ್ ಅಧಿವೇಶನ ಆರಂಭವಾಗಿದೆ. ಮಾರ್ಚ್ 25ರಂದು ಲಾಕ್ಡೌನ್ ಘೋಷಣೆಗೂ ಮೊದಲು ಮಾರ್ಚ್ 22ರಂದು ಸಂಸತ್ನ ಕೊನೆ ಅಧಿವೇಶನ ನಡೆದಿತ್ತು. ಸುಮಾರು 6 ತಿಂಗಳು ನಂತರ ಈಗ ಮತ್ತೆ ಮುಂಗಾರು ಅಧಿವೇಶನ ಶುರುವಾಗುತ್ತಿದೆ.
ಕೊವಿಡ್ ಮಾರ್ಗಸೂಚಿಗಳ ಅನ್ವಯ ಕಲಾಪಕ್ಕೆ ಏರ್ಪಾಡು ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡ ಬೇಕಿರುವುದರಿಂದ ಏಕಕಾಲಕ್ಕೆ ಎಲ್ಲ ಸಂಸದರು ಕೂಡಲು ಆಗುವುದಿಲ್ಲ. ಹೀಗಾಗಿ ಲೋಕಸಭೆ ಮತು ರಾಜ್ಯಸಭೆಗಳು ತಮ್ಮ ಅಧಿವೇಶನದ ಸಭಾಂಗಣವನ್ನು ಹಂಚಿಕೊಳ್ಳಬೇಕಿದೆ. ಹೀಗಾಗಿ ಶಿಫ್ಟ್ ನಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಕಲಾಪ ನಡೆಯಲಿವೆ. ಕೆಲವು ನೂರು ಸಂಸದರು ಪಕ್ಕದ ಹಾಲ್ನಿಂದ ವರ್ಚುವಲ್ ಕಲಾಪದಲ್ಲಿ ಭಾಗಿಯಾಗಬೇಕಿದೆ.
ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟು 785 ಸದಸ್ಯರ ಪೈಕಿ 200ಕ್ಕೂ ಹೆಚ್ಚು ಜನ 65 ವಯಸ್ಸು ದಾಟಿದವರಿದ್ದಾರೆ. ಸುಮಾರು 24 ಸಂಸದರು ಕೊವಿಡ್ ಬಾಧಿತರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಪಕ್ಷ ನಾಯಕಿ ಸೋನಿಯಾ ಗಾಂಧಿ ಚಿಕಿತ್ಸೆಗೆಂದು ವಿದೇಶಕ್ಕೆ ಹೋಗಿದ್ದಾರೆ. ಅವರ ಜೊತೆ ಅವರ ಪುತ್ರ ಸಂಸದ ರಾಹುಲ್ ಗಾಂಧಿ ಕೂಡ ಹೋಗಿದ್ದಾರೆ.
ಗೃಹ ಸಚಿವ ಅಮಿತ್ ಶಾ ಏಮ್ಸ್ ನಲ್ಲಿದ್ದಾರೆ. ಇದೆಲ್ಲದರ ಜೊತೆಗೆ ಖಾಯಂ ಚಕ್ಕರ್ ಹೊಡೆಯುವ ಸಂಸದರ ಲಿಸ್ಟೂ ದೊಡ್ಡದೇ ಇದೆಯೆನ್ನಿ.
ಜೂನ್ನಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿದ ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳಿಗೆ ಅಂಗೀಕಾರ ಪಡೆಯಲು ಸರ್ಕಾರ ಯತ್ನಿಸಲಿದೆ. ಕುಸಿದ ಆರ್ಥಿಕತೆ, ಕೊವಿಡ್ ಬಿಕ್ಕಟ್ಟಿನ ಅಸಮರ್ಪಕ ನಿರ್ವಹಣೆ ಕುರಿತು ವಿಪಕ್ಷಗಳು ಯುದ್ಧ ಸಾರಲಿವೆ. ಬಹುಮುಖ್ಯವಾದ ಪ್ರಶ್ನೋತ್ತರ ಅವಧಿಯೇ ಇಲ್ಲವಾದ್ದರಿಂದ ಇದು ಆಡಳಿತ ಪಕ್ಷಕ್ಕೆ ಅನುಕೂಲವಾಗವ ಅಧಿವೇಶನವೇ ಆಗಲಿದೆ.