ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ತಾಲೂಕು ಕಂಗ್ರಾಳಿ ಕೆ.ಎಚ್. ಗ್ರಾಮದ ಬಾಡಿಗೆ ಮನೆಯಲ್ಲಿ ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಪತ್ನಿ ವಾಮಾಚಾರದ ಬಗ್ಗೆ ಸಂಶಯ ವ್ಯಕ್ತಪಡಿಸಿ ದೂರು ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಬೆಳಗಾವಿ ನಗರ ಡಿಸಿಪಿ ಡಾ.ವಿಕ್ರಮ ಆಮ್ಟೆ ತಿಳಿಸಿದರು.
ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಡಿಸಿಪಿ ಡಾ.ಆಮ್ಟೆ ಮಾತನಾಡಿ, ನಿನ್ನೆ ಇಬ್ಬರು ಮಕ್ಕಳಿಗೆ ವಿಷ ನೀಡಿ ತಾನೂ ಕುಡಿದ ವ್ಯಕ್ತಿ ಇನ್ನು ಚೇತರಿಸಿಕೊಂಡಿಲ್ಲ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ವಿಷ ಕುಡಿದ ಆತನ 4 ವರ್ಷ ಹಾಗೂ 8 ವರ್ಷದ ಇಬ್ಬರು ಹೆಣ್ಣುಮಕ್ಕಳು ನಿನ್ನೆಯೇ ಮೃತಪಟ್ಟಿದ್ದಾರೆ.
ಈ ಸಂಬಂಧ ಆರೋಪಿಯ ಪತ್ನಿ ಜಯಶ್ರೀ ಅನಿಲ ಬಾಂದೇಕರ ನೀಡಿದ ದೂರು ದಾಖಲಿಸಿಕೊಳ್ಳಲಾಗಿದೆ. ಆಕೆ ವಾಮಾಚಾರ ನಡೆದಿರುವ ಮಾಹಿತಿ ನೀಡಿದ್ದಾಳೆ. ಕಂಗ್ರಾಳಿ ಗ್ರಾಮದ ತನ್ನ ಮನೆಯ ಎದುರು ಜುಲೈ 11ರಂದು ಮಾಟ ಮಂತ್ರ ಮಾಡಿ ಇರಿಸಿದ್ದ ವಸ್ತುಗಳನ್ನು ಅನಿಲ ತೆಗೆದಿದ್ದ. ಅಂದಿನಿಂದ ಅನಿಲ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ಪರಿಶೀಲಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ತನಿಖೆ ಪ್ರಗತಿಯಲ್ಲಿದ್ದು, ಪ್ರಕರಣ ಹಿನ್ನಲೆ ಶೀಘ್ರ
ಬಹಿರಂಗವಾಗಲಿದೆ ಎಂದರು.