ವಿಜಯಸಾಕ್ಷಿ ಸುದ್ದಿ, ಇಸ್ರೇಲ್
ಇಸ್ರೇಲ್ ಹಾಗೂ ಪ್ಯಾಲೆಸ್ತೇನ್ ನಡುವಿನ ಸಮರಕ್ಕೆ ಅಲ್ಲಿನ ಜನ ಬಲಿಯಾಗುತ್ತಿದ್ದು, ಇಡೀ ವಿಶ್ವವೂ ಆತಂಕ ವ್ಯಕ್ತಪಡಿಸುತ್ತಿದೆ.
ಈಗಾಗಲೇ ಎರಡೂ ರಾಷ್ಟ್ರಗಳ ವೈಷಮ್ಯಕ್ಕೆ ನೂರಾರು ಅಮಾಯಕರು ಬಲಿಯಾಗಿದ್ದಾರೆ. ಸದ್ಯ ಅಮಾಯಕ ಜನರ ಸಾವಿನ ಸಂಖ್ಯೆ 118ಕ್ಕೆ ಏರಿಕೆಯಾಗಿದೆ. ಸದ್ಯದ ಸ್ಥಿತಿ ನೋಡಿದರೆ ಪ್ಯಾಲೆಸ್ತೇನ್ – ಇಸ್ರೇಲ್ ಮಧ್ಯೆ ಯುದ್ಧದ ಭೀತಿ ಆವರಿಸಿದೆ.
ಗಾಜಾ ಪಟ್ಟಿಗೆ ಇಸ್ರೇಲ್ ರಾಷ್ಟ್ರವು ಭಾರಿ ಪ್ರಮಾಣದ ಸೇನೆ, ಶಸ್ತ್ರಾಸ್ತ್ರ ರವಾನಿಸಿದೆ. ಹೀಗಾಗಿ ಗಲ್ಫ್ ರಾಷ್ಟ್ರಗಳ ನಾಯಕರಲ್ಲಿ ಭಯ ಕಾಣುತ್ತಿದೆ. ಇನ್ನೊಂದೆಡೆ ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದರೆ, ಇಸ್ರೇಲ್ ಕೂಡ ಪ್ಯಾಲೆಸ್ತೇನ್ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಆದರೆ, ಈ ಜಗಳದಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ.
ಸಾವಿರಾರು ಜನ ನೆಲೆ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಎಲ್ಲೆಂದರಲ್ಲಿ ರಾಕೆಟ್ ಗಳು ಹಾರಿ ಬರುತ್ತಿವೆ. ಗಡಿ ಭಾಗದ ಜನ ಜೀವ ಕೈಲಿಡಿದು ಬದುಕುತ್ತಿದ್ದಾರೆ. ಇಸ್ರೇಲ್ ಮತ್ತು ಮಧ್ಯಪ್ರಾಚ್ಯದ ನಡುವಿನ ಸಮರ ಇದೇ ಮೊದಲಲ್ಲ. ಶತಮಾನಗಳ ಇತಿಹಾಸವೇ ಆ ಯುದ್ಧಕ್ಕೆ ಇದೆ.
ಸದ್ಯ ಇಡೀ ವಿಶ್ವ ಕೊರೊನಾ ಅಟ್ಟಹಾಸದಲ್ಲಿ ನಲುಗುತ್ತಿದ್ದರೆ, ಈ ಎರಡೂ ರಾಷ್ಟ್ರಗಳು ಪ್ರತಿಷ್ಠೆಗಾಗಿ ಬಡಿದಾಡುತ್ತಿವೆ.
ದಾಳಿ – ಪ್ರತಿದಾಳಿ ನೋಡಿದರೆ ಮೂರನೇ ಯುದ್ಧದ ಆತಂಕ ಎದುರಾಗುತ್ತಿದೆ. ಇಸ್ರೇಲ್ ಪರವಾಗಿ ಯುರೋಪ್ ಹಾಗೂ ಅಮೆರಿಕ ನಿಂತರೆ, ಪ್ಯಾಲೆಸ್ತೇನ್ ನ ಪರವಾಗಿ ಇಸ್ರೇಲ್ ಶತ್ರುಗಳು ಹಾಗೂ ಅಮೆರಿಕ ಶತ್ರು ರಾಷ್ಟ್ರಗಳು ನಿಲ್ಲುವ ಸಾಧ್ಯತೆ ಇದೆ. ಹೀಗಾಗಿ ಮೂರನೇ ಯುದ್ಧದ ಭಯವಾಗುತ್ತಿದೆ.
ಇಸ್ರೇಲ್ ಸಣ್ಣ ದೇಶವಾದರೂ ಅರಬ್ ಒಕ್ಕೂಟದ ಹತ್ತಾರು ದೇಶಗಳನ್ನು ಎದುರು ಹಾಕಿಕೊಂಡಿದೆ. ಆದರೆ ಇದೀಗ ದೇಶದೊಳಗೆ ಘರ್ಷಣೆ ಆರಂಭವಾಗಿದೆ. ತನ್ನ ವೈರಿ ಪ್ಯಾಲೆಸ್ತೇನ್ ಬಗ್ಗುಬಡಿಯಲು ಇಸ್ರೇಲ್ ಪಡೆಗಳು ಬಲಪ್ರಯೋಗವನ್ನು ಮುಂದುವರಿಸಿದ್ದಾರೆ.
ಇಸ್ರೇಲ್ ಹಾಗೂ ಗಾಜಾಪಟ್ಟಿ ಕಥೆ ಸಿರಿಯಾಗಿಂತ ಭಯಾನಕವಾಗಿದೆ. ಒಂದುಕಡೆ ಹಮಾಸ್ ಉಗ್ರರು ಅದು ನಮ್ಮ ನೆಲ ಅಂತಾ ಇಸ್ರೇಲ್ ಭೂಮಿ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ತಮ್ಮ ದೇಶದ ಭೂಭಾಗ ಉಳಿಸಿಕೊಳ್ಳಲು ಇಸ್ರೇಲ್ ಬಂಡುಕೋರರ ಮೇಲೆ ದಾಳಿ ನಡೆಸುತ್ತಲೇ ಬಂದಿದೆ.