ಊರು ಒತ್ತಟ್ಟಿಗಿರಲಿ, ಗ್ರಾ.ಪಂ.ನಲ್ಲೇ ಮೂಲಸೌಲಭ್ಯವಿಲ್ಲ!ಇಂಟರ್‌ನೆಟ್ ಸ್ಥಗಿತ, ಮೊಬೈಲ್ ವೈಫೈ ಗತಿ!

0
Spread the love

(ಅಭಿವೃದ್ಧಿ ಮರೆತ ಚಿಂಚಲಿ, ಭಾಗ-3)

Advertisement

ಚಿಂಚಲಿ ಪಂಚಾಯತಿ ಕಟ್ಟಡದ ಛಾವಣಿ ತೂತು- ಪಾಳುಬಿದ್ದ ಸಮುದಾಯ ಶೌಚಾಲಯಗಳು

ದುರ್ಗಪ್ಪ ಹೊಸಮನಿ


ವಿಜಯಸಾಕ್ಷಿ ವಿಶೇಷ, ಮುಳಗುಂದ

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಇತ್ತೀಚೆಗಷ್ಟೇ ನಡೆಸಿದ ‘ಮೀಷನ್ ಅಂತ್ಯೋದಯ-2020’ ಸಮೀಕ್ಷೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲಕೋಟಿ ಸುಸಜ್ಜಿತ ಗ್ರಾಮವೆಂದು ಪ್ರಥಮ ಸ್ಥಾನ ಪಡೆದು ಇಡೀ ದೇಶಕ್ಕೆ ಮಾದರಿಯಾಗಿದೆ.

ದೇಶಾದ್ಯಂತ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿರುವುದು ಜಿಲ್ಲೆಯ ಜನರ ಹೆಮ್ಮೆಯ ಸಂಗತಿ. ಆದರೆ, ಕೂಗಳತೆ ದೂರದಲ್ಲಿರುವ ಚಿಂಚಲಿ ಪಂಚಾಯತಿಗೆ ಮಾತ್ರ ಗ್ರಹಣ ಹಿಡಿದಿರುವುದು ವಿಪರ್ಯಾಸ.

ಗ್ರಾಮೀಣ ಜನರು ನಗರದ ಪ್ರದೇಶಗಳಿಗೆ ಅಲೆದಾಡಿ ಸುಸ್ತಾಗಬಾರದೆಂದು ಸರ್ಕಾರ ಸಕಾಲ ಯೋಜನೆಯಡಿ 100ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿದ್ದು, ಅವುಗಳಲ್ಲಿ ಕೆಲವು ಸೇವೆಗಳಿಗೆ ಗ್ರಾ.ಪಂ. ಮಟ್ಟದಲ್ಲಿಯೇ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಚಿಂಚಲಿ ಗ್ರಾ.ಪಂ.ನಲ್ಲಿ ಮಾತ್ರ ಈ ಎಲ್ಲ ಸೇವೆಗಳು ಸ್ಥಗಿತಗೊಂಡಿವೆ. ಜಾತಿ, ಆದಾಯ, ಉತಾರ, ರಹವಾಸಿ, ರೇಷನ್ ಕಾರ್ಡ್ ಮುಂತಾದವುಗಳಿಗೆ ಅರ್ಜಿ ಹಾಕಬೇಕಾದರೂ ಸುಮಾರು 8 ಕಿ.ಮೀ. ಪ್ರಯಾಣಿಸಬೇಕು.

ಶೌಚಾಲಯವೇ ಇಲ್ಲ!

ಮೂರ್ನಾಲ್ಕು ವರ್ಷಗಳಿಂದಲೇ ಚಿಂಚಲಿ ಬಯಲು ಮುಕ್ತ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೂ, ಬಯಲು ಶೌಚ ನಿಂತಿಲ್ಲ. ಪಂಚಾಯತಿ ಪಕ್ಕದಲ್ಲೇ ಇರುವ ಕಲ್ಲೂರ, ನೀಲಗುಂದ, ಮುಳಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಯಲು ಶೌಚದ ಕೇಂದ್ರ ಸ್ಥಾನಗಳಾಗಿವೆ. ಮೂರು ಹಳ್ಳಿಗಳಲ್ಲಿ ಸಮುದಾಯ ಶೌಚಾಲಯಗಳಂತೂ ಪಾಳು ಬಿದ್ದಿವೆ. ಪಂಚಾಯತಿ ಆವರಣದಲ್ಲಿಯೇ ಹೆಸರಿಗೊಂದು ಶೌಚಾಲಯವಿಲ್ಲದಿರುವುದು ಜನ ನಾಚುವಂತೆ ಮಾಡಿದೆ.

ಛಾವಣಿ ತೂತು

ಗ್ರಾಮ ಪಂಚಾಯತಿಯ ಕಟ್ಟಡದ ಮಾಳಿಗೆಯ ಚಾವಣಿ ಹೆಂಚು ಒಡೆದು ಹೋಗಿವೆ. ಇದರಿಂದ ಮಳೆಗಾಲದಲ್ಲಿ ನೀರು, ಚಳಿಗಾಲದಲ್ಲಿ ಚಳಿ, ಬೇಸಿಗೆಯಲ್ಲಿ ಬಿಸಿಲು ಒಳ ನುಸುಳುತ್ತಿದ್ದರೂ ದುರಸ್ತಿ ಭಾಗ್ಯ ಸಿಕ್ಕಿಲ್ಲ. ಜನರು ಕುಳಿತುಕೊಳ್ಳಲು ಸೂಕ್ತವಾದ ವ್ಯವಸ್ಥೆ ಇಲ್ಲ. ಆವರಣದಲ್ಲಿಯೇ ದನಕರುಗಳನ್ನು ಕಟ್ಟುತ್ತಿರುವುದರಿಂದ ಗ್ರಾ.ಪಂ. ಗೋಶಾಲೆಯಾಗಿ ಪರಿವರ್ತನೆಯಾಗಿದೆ. ಕಚೇರಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳನ್ನು ಬೇಕಂತಲೇ ಕೆಡಿಸಿದ್ದಾರೆ ಎಂದು ಅಲ್ಲಿನ ಜನರು ಆರೋಪಿಸುತ್ತಿದ್ದಾರೆ.

ಮೊಬೈಲ್ ವೈಫೈಯೇ ಗತಿ

ಗ್ರಾ.ಪಂ.ನಲ್ಲಿ ಒದಗಿಸಲಾಗಿದ್ದ ಇಂಟರ್ನೆಟ್ ಸಂಪರ್ಕ ಸಂಪೂರ್ಣ ಸ್ತಬ್ಧವಾಗಿದೆ. ಹಾಗಾಗಿ ಮೊಬೈಲ್ ವೈಫೈ ಕನೆಕ್ಟ್ ಮಾಡಿಕೊಂಡು ಮಾಡಬೇಕಾದ ದುಸ್ಥತಿ ಬಂದದೊಗಿದೆ. ಸ್ಥಗಿತಗೊಂಡಿರುವ ಇಂಟರ್‌ನೆಟ್ ಸೌಲಭ್ಯವನ್ನು ಅಧಿಕಾರಿಗಳು ದುರಸ್ತಿ ಮಾಡಿಸಿಲ್ಲ. ಇದರ ನಿರ್ವಹಣೆಯ ಹೊಣೆ ಯಾರದು? ಇಂಟರ್ನೆಟ್ ವ್ಯವಸ್ಥೆ ಇಲ್ಲದಿರುವುದರಿಂದ ಖಾಸಗಿ ನೆಟ್ ಸೆಂಟರ್‌ಗಳಲ್ಲಿ ದುಡ್ಡು ಕೊಟ್ಟು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹೊಸ ಕಟ್ಟಡಕ್ಕೆ ಪ್ರಸ್ತಾವನೆ
ಹೊಸ ಕಟ್ಟಡಕ್ಕಾಗಿ ಜಿಲ್ಲಾ ಪಂಚಾಯತಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಣ ಮಂಜೂರಾತಿ ಆಗಬೇಕಿದೆ. ಎಂಜಿಎನ್‌ಆರ್‌ಇಜಿ ಯೋಜನೆಯಲ್ಲಿಯೂ ೧೦ ಲಕ್ಷ ರೂ.ವರೆಗೆ ಅನುದಾನ ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ. ಕಲ್ಲೂರ ರಸ್ತೆಯಲ್ಲಿ ಪಂಚಾಯತಿ ನಿವೇಶನವಿದ್ದು, ಇಲ್ಲಿ ಕಟ್ಟಬೇಕೋ ಅಥವಾ ಹಳೆಯ ಕಟ್ಟಡವನ್ನೇ ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕೋ ಎಂಬ ಗೊಂದಲವಿದೆ. ಹಾಗಾಗಿ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅನಂತರ ಸಭೆಯಲ್ಲಿ ತೀರ್ಮಾನಿಸಲಾಗುವುದು.

ಎಸ್, ಎಸ್ ತೊಂಡಿಹಾಳ, ಪಿಡಿಒ,


Spread the love

LEAVE A REPLY

Please enter your comment!
Please enter your name here