ವಿಜಯಸಾಕ್ಷಿ ಸುದ್ದಿ, ಗದಗ
ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ ಹಾಗೂ ಪ್ರಿಯಕರನಿಗೆ ಬುದ್ಧಿಮಾತು ಹೇಳಿದ ವ್ಯಕ್ತಿಗೆ ಬಡಿಗೆಯಿಂದ ತಲೆಗೆ ಹೊಡೆದು ಕೊಲೆ ಬೆದರಿಕೆ ಹಾಕಿದ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಕೋಡಿಕೊಪ್ಪ ಗ್ರಾಮದಲ್ಲಿ ನಡೆದಿದೆ.
ಮೂಲತಃ ನವಲಗುಂದ ತಾಲೂಕಿನ ತುಪ್ಪದ ಕುರಹಟ್ಟಿ ಗ್ರಾಮದ, ಸದ್ಯ ಕೋಡಿಕೊಪ್ಪದಲ್ಲಿ ವಾಸವಾಗಿರುವ ಕುಮಾರಸ್ವಾಮಿ ಗಂಗಯ್ಯ ಮ್ಯಾಗೇರಿಮಠ ಎಂಬಾತನೇ ಹಲ್ಲೆ ಮಾಡಿದ ಆರೋಪಿ.
ಬುಧವಾರ ಮೇ ೧೯ರಂದು ರಾತ್ರಿ ಈ ಕೃತ್ಯ ನಡೆದಿದ್ದು, ಕೋಡಿಕೊಪ್ಪ ಗ್ರಾಮದ ಮಹಿಳೆಯೊಂದಿಗೆ ಅನೇಕ ದಿನಗಳಿಂದ ಆರೋಪಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಮಹಿಳೆಯ ಪತಿ, ಅತ್ತಿಗೆಗೆ ವಿಷಯ ಗೊತ್ತಾಗಿ ಇಬ್ಬರಿಗೂ ಬುದ್ಧಿಮಾತು ಹೇಳಿದ್ದರು.
ಆರು ತಿಂಗಳ ಹಿಂದೆ ಹೇಳಿದ್ದ ಬುದ್ಧಿಮಾತಿಗೆ ಆರೋಪಿ ಕುಮಾರಸ್ವಾಮಿ ಸಿಟ್ಟಾಗಿ ಹಲ್ಲು ಮಸೆಯುತ್ತಿದ್ದ. ಕಂಡ ಕಂಡಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇಷ್ಟಕ್ಕೇ ಸುಮ್ಮನಾಗದ ಆರೋಪಿ ಕುಮಾರಸ್ವಾಮಿ, ಬುಧವಾರ ರಾತ್ರಿ ಫಿರ್ಯಾದಿಯ ಮನೆ ಹೊಕ್ಕು ಬಡಿಗೆಯಿಂದ ಹಲ್ಲೆ ಮಾಡಿ, ‘ಎರಡು ಎಕರೆ ಹೊಲ ಹೋದ್ರೂ ಚಿಂತೆಯಿಲ್ಲ, ನಿನ್ನ ಜೀವ ಸಹಿತ ಬಿಡಲ್ಲ’ ಅಂತ ಬೆದರಿಕೆ ಹಾಕಿದ್ದಾನೆ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.