ವಿಜಯಸಾಕ್ಷಿ ಸುದ್ದಿ, ಬೆಟಗೇರಿ:
ಮೊಬೈಲ್ ವಿಷಯಕ್ಕಾಗಿ ಯುವಕರ ನಡುವೆ ಪ್ರಾರಂಭವಾದ ಜಗಳ ಮಾರಾಮಾರಿಯವರೆಗೂ ಹೋಗಿ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುವವರೆಗೆ ತಲುಪಿದೆ.
ಬೆಟಗೇರಿಯ ರಂಗಾವಧೂತ ನಗರದ ವೀರೇಶ ರೇವಪ್ಪ ನಿಟ್ಟಾಲಿ ಹಾಗೂ ಆರೋಪಿ ಶರಣಬಸವೇಶ್ವರ ನಗರದ ಜಾವೇದ ಬ್ಯಾಳಿರೊಟ್ಟಿ ಮತ್ತು ಕುರಹಟ್ಟಿ ಪೇಟೆಯ ಸೈಫುಲ್ಲ ನಡುವೆ ವಾರದ ಹಿಂದೆ ಮೊಬೈಲ್ ವಿಷಯಕ್ಕೆ ಸಂಬಂಧಿಸಿದಂತೆ ಜಗಳವಾಗಿತ್ತು. ಇದೇ ದ್ವೇಷವನ್ನಿಟ್ಟುಕೊಂಡು ಜುಲೈ 5ರಂದು ಮದ್ಯಾಹ್ನ 12-30ರ ಸುಮಾರಿಗೆ ಗದಗದ ವಿ.ಡಿ.ಎಸ್.ಟಿ.ಸಿ ಕಾಲೇಜು ಮೈದಾನದ ಹತ್ತಿರದ ರಸ್ತೆಯಲ್ಲಿ ವೀರೇಶ ತನ್ನ ಬೈಕ್ ಮೇಲೆ ಹೋಗುತ್ತಿದ್ದಾಗ, ಆರೋಪಿತರು ಆಟೋದಲ್ಲಿ ಬಂದವರೇ ರಸ್ತೆಯಲ್ಲೇ ನಿಲ್ಲಿಸಿ, `ಏನಲೇ, ನಿನ್ನ ಆಟ ಭಾಳ ಆಗೈತಿ. ನಮ್ಮ ಹುಡುಗರಿಗೆ ಸಿಟ್ಟಿನ ಮುಖದಿಂದ ನೋಡತೀಯಂತ? ಏನ್ ಮಾಡ್ತೀ, ಈಗ ಮಾಡಿ ತೋರಿಸು’ ಎಂದು ಅವಾಚ್ಯ ಶಬ್ಧಗಳಿಂದ ಬೈದಾಡುತ್ತ, ಆರೋಪಿ ಜಾವೇದ ಹಾಗೂ ಇತರರು ಸೇರಿ ತಮ್ಮ ಕೈಲಿದ್ದ ಬಡಿಗೆಯಿಂದ ವೀರೇಶನ ಬೆನ್ನು, ಕೈಕಾಲುಗಳ ಮೇಲೆ ಹೊಡೆಯಲು ಪ್ರಾರಂಭಿಸಿದ್ದು, ವೀರೇಶ ಭಯಗೊಂಡು ಅಲ್ಲಿಂದ ತಪ್ಪಿಸಿಕೊಂಡು ಓಡಿದ್ದಾನೆ. ಆರೋಪಿತರೂ ಕೂಡ ವೀರೇಶನ ಬೆನ್ನಟ್ಟಿದ್ದಾರೆ.
ವೀರೇಶ ಅವರಿಂದ ತಪ್ಪಿಸಿಕೊಂಡು ಸ್ವಲ್ಪದೂರ ಓಡಿದಾಗ, ಆರೋಪಿತರು ಅಲ್ಲೇ ನಿಲ್ಲಿಸಿದ್ದ ಫಿರ್ಯಾದಿಯ ಬೈಕ್ ಕಡೆಗೆ ಬಂದು, ಎಲ್ಲರೂ ಸೇರಿ ಅದನ್ನು ಕೆಡವಿ ತಮ್ಮ ಕೈಲಿದ್ದ ಬಡಿಗೆಯಿಂದ ಬಡಿದು, ದೊಡ್ಡ ಕಲ್ಲನ್ನು ಎತ್ತಿ ಬೈಕಿನ ಮೇಲೆ ಹಾಕಿ ಹಾನಿಗೊಳಿಸಿರುವದಾಗಿ ಹಾಗೂ ಜೀವ ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಜಾವೇದ ಬ್ಯಾಳಿರೊಟ್ಟಿ, ಸಾಹಿಲ್, ಸೋಹೆಲ್, ರಾಕೇಶ್, ಅಭಿಷೇಕ್, ಯಶವಂತ್, ಸೈಫುಲ್, ಅಭಿಷೇಕ್ ಹಾಗೂ ವಿನೋದ್ ಎಂಬ ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.