ಅನಂತ ಹುದೆಂಗಜೆ
ಟಿಂಕ ಟಿಂಕ ಟಿಂಕ ಎಂದು ಪದಗಳ ಜತೆಗೆ ಆಟವಾಡುತ್ತಲೇ ಅದು `ಕಟ್ಟಿಂಗ್ ಶಾಪ್’ ಎಂದು ಆಗುವ ಸೃಜನಶೀಲತೆಯನ್ನು ಹೊಸಬರಿಂದಷ್ಟೇ ನಿರೀಕ್ಷಿಸಲು ಸಾಧ್ಯ. ಈ ಹಾಡು ಈ ಚಿತ್ರ ಸಿನೆಮಾ ಎಡಿಟರ್ ಒಬ್ಬನ ಕಥೆ ಎಂಬುದನ್ನೂ ತಿಳಿಸುತ್ತದೆ. ಮೇ 20ರಂದು ಉಳಿದ 10 ಸಿನೆಮಾಗಳ ಜತೆಗೆ ಚಂದನವನದ ಬೆಳ್ಳಿ ತೆರೆಗೆ ಬಂದ `ಕಟ್ಟಿಂಗ್ ಶಾಪ್’ ನವಿರಾದ ಹಾಸ್ಯದ ಮೂಲಕವೇ ನಿಮಗೆ ಕಚಗುಳಿಯಿಡುತ್ತದೆ.
ಈ ಚಿತ್ರದ ನಿರ್ದೇಶಕ – ಪವನ್ ಭಟ್, ನಾಯಕ ನಟ ಹಾಗೂ ಸಂಗೀತ ನಿರ್ದೇಶಕ ಪ್ರವೀಣ್ ಕೆ.ಬಿ., ನಾಯಕಿ ಅರ್ಚನಾ ಕೊಟ್ಟಿಗೆ, ಹಲವು ಸಹನಟರು, ತಂತ್ರಜ್ಞರು ಎಲ್ಲರೂ ಹೊಸಬರು. ಪವನ್-ಪ್ರವೀಣ್ ಸೋದರರು ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಸ್ವತಂತ್ರ ಯೋಜನೆ ಇದೇ ಮೊದಲಿನದು.
ನಾಯಕನ ಸೋದರಮಾವನ ಪಾತ್ರದಲ್ಲಿ ಮಿಂಚಿರುವ ನವೀನ್ ಕೃಷ್ಣ, ಪಕ್ಕದ ಮನೆ ಅಂಕಲ್ ಪಾತ್ರದಲ್ಲಿ ದೊರೈ ಭಗವಾನ್, ಹೊಸಬರನ್ನು ಪ್ರೋತ್ಸಾಹಿಸಬೇಕೆಂಬ ಸಂದೇಶ ಸಾರುವ ನಿರ್ದೇಶಕನಾಗಿ ಕೆಲವೇ ದೃಶ್ಯಗಳಲ್ಲಿ ತೆರೆಯನ್ನು ಆವರಿಸುವ ಓಂ ಪ್ರಕಾಶ್ ರಾವ್, ಮತ್ತು ಪ್ರಶಸ್ತಿ ವಿತರಿಸಲು ವೇದಿಕೆಯೇರುವ ತರುಣ್ ಸುಧೀರ್ ಮಾತ್ರ ಪರಿಚಿತ ಮುಖಗಳು.
ಕಟ್ಟಿಂಗ್ ಶಾಪ್ ಕೇವಲ 122 ನಿಮಿಷಗಳಷ್ಟು ದೀರ್ಘವಾಗಿದೆ. ಆದರೆ, ನಿಮ್ಮನ್ನು ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಅನಗತ್ಯ ಬಿಲ್ಡಪ್‌ಗಳಿಲ್ಲ. ಹೊಡೆದಾಟ-ಬಡಿದಾಟ, ಕಿವಿಗಪ್ಪಳಿಸುವ ಅಬ್ಬರದ ಸಂಗೀತವಂತೂ ಇಲ್ಲವೇ ಇಲ್ಲ. ಪ್ರೀತಿಯ ಎಳೆಯಿದ್ದರೂ ಎಳೆದಾಡುವ ಸನ್ನಿವೇಶಗಳಿಲ್ಲ.
ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಬೇಕು, ಪ್ರೀತಿಸಿದವರಿಗಾಗಿ ಏನು ಮಾಡಬೇಕು ಎನ್ನುವ ಸಂದೇಶವೂ ಸೂಚ್ಯವಾಗಿದೆ. ನಗುತ್ತ, ಬಿಕ್ಕಳಿಸುತ್ತಲೇ ಸಿನೆಮಾ ನೋಡಿ ಹೊರಬರುವಾಗ ಮನಸ್ಸು ಫ್ರೆಶ್ ಆಗಿರುತ್ತದೆ.
ನಾಯಕ ಪ್ರವೀಣ ವೀಡಿಯೋ ಎಡಿಟಿಂಗ್ ಮೂಲಕ ಬದುಕನ್ನು ಕಟ್ಟಿಕೊಳ್ಳಲು ಪಡುವ ಪಾಡನ್ನು ಚಿತ್ರವು ಮನೋಜ್ಞವಾಗಿ ಬಿಂಬಿಸುತ್ತದೆ. ಕಾರು ರಿವರ್ಸ್ ತೆಗೆಯುವಾಗ ಪ್ರತಿ ದಿನವೂ ಪ್ರವೀಣನ ಸೈಕಲ್‌ಗೆ ಡಿಕ್ಕಿ ಹೊಡೆದು, `ಪ್ರವೀಣ್, ಸಾರಿ ಕಣಪ್ಪ, ಯೂ ನೀಡ್ ಎನಿ ಹೆಲ್ಪ್?’ ಎಂದು ಕೇಳಿ ಕೇಳಿ ತಲೆ ಚಿಟ್ಟು ಹಿಡಿಸುವ ಪಕ್ಕದ ಮನೆಯ ಮುದುಕ, ‘ನೀನು ಅಂದುಕೊಂಡಿದ್ದನ್ನು ಸಾಧಿಸುವ ತನಕ ಮನೆ ಕಡೆ ಬರಬೇಡಪ್ಪ’ ಎಂದು ಹೇಳುವ ತಾಯಿ, ಪ್ರವೀಣ ಮನೆಯಲ್ಲಿಟ್ಟಿದ್ದ ಕಂಪ್ಯೂಟರ್‌ಗಳನ್ನು ದೊಡ್ಡ ಮಗನಿಗೆ ತಿಳಿಯದಂತೆ ಪ್ಯಾಕ್ ಮಾಡಿಕೊಡುವಾಗ ಅದರೊಳಗೆ ಹಣವಿಟ್ಟಿದ್ದನ್ನು ಕಂಡಾಗ ನಿಮ್ಮ ಹೃದಯ ಆರ್ದ್ರವಾಗದೇ ಇರಲು ಸಾಧ್ಯವೇ? ಕೊನೆಗೂ ಪ್ರವೀಣನಿಗೆ ಆಸರೆಯಾಗುವುದು- ಮಾವನ ಅದೇ `ಡಬ್ಬಾ ಸ್ಟುಡಿಯೋ’!
ಕಹಿ ವಾಸ್ತವಗಳು:
ನೀಲಿ ಚಿತ್ರವೊಂದರಲ್ಲಿ `ಸಂಕಲನ: ಪ್ರವೀಣ್’ ಎಂದು ದೊಡ್ಡದಾಗಿ ಮುದ್ರಿಸಿರುತ್ತಾರೆ. ಆದರೆ, ಖುಷಿ ಪಡುವಂತಿಲ್ಲ. ಒಳ್ಳೆಯ ಚಿತ್ರವೊಂದಕ್ಕಾಗಿ ತುಂಬ ಶ್ರಮವಹಿಸಿ ಕೆಲಸ ಮಾಡಿದರೆ, ಅಲ್ಲಿ ಆತನ ಬದಲು ಬೇರೊಬ್ಬ ಸಂಕಲನಕಾರನ ಹೆಸರಿರುತ್ತದೆ.
ಬೇಸರ-ಸಿಟ್ಟು ನುಂಗಿಕೊಳ್ಳದೆ ವಿಧಿಯಿಲ್ಲ. ಇದು ಚಿತ್ರಜಗತ್ತಿನ ಕಹಿ ಸತ್ಯವನ್ನು ತೆರೆದಿಡುತ್ತದೆ. ಹಲವು ಹೊಸಬರ ಶ್ರಮ ಹೇಗೆ ಖ್ಯಾತನಾಮರ ಪಾಲಾಗುತ್ತದೆ ಎಂಬುದು ಅರಗಿಸಿಕೊಳ್ಳುವುದು ಕಷ್ಟ.
ಮದುವೆ ಸಮಾರಂಭದ ಒಂದು ವೀಡಿಯೋದಲ್ಲಿ ಬ್ಯಾಟರಿ ಖಾಲಿಯಾಗಿ ತಾಳಿ ಕಟ್ಟುವ ದೃಶ್ಯವೇ ಸೆರೆಯಾಗದೇ ಇದ್ದಾಗ ತಂತ್ರಜ್ಞಾನವನ್ನು ಬಳಸಿ ಪ್ರವೀಣ ಅದನ್ನು ಮರುಸೃಷ್ಟಿ ಮಾಡಿ ಮಾವನ ಮಾನ ಉಳಿಸುತ್ತಾನೆ. ಅದಕ್ಕೆ ಪ್ರತಿಯಾಗಿ ಮಾವ ತನ್ನ ಶೆಡ್ ಒಂದನ್ನು ಬಿಟ್ಟುಕೊಡುತ್ತಾನೆ. ಅದರಲ್ಲಿ ಈ ಮೊದಲು ಯಾರೋ ಸಲೂನ್ ನಡೆಸುತ್ತಿದ್ದರು. ತನ್ನ ಕೆಲಸವೂ ಕತ್ತರಿಸುವುದು-ಜೋಡಿಸುವುದೇ ಆಗಿರುವುದರಿಂದ ಪ್ರವೀಣ ಅಲ್ಲಿ ತಾನು ತೆರೆದ ಕಚೇರಿಗೂ ಕಟ್ಟಿಂಗ್ ಶಾಪ್ ಎಂದೇ ಹೆಸರಿಡುತ್ತಾನೆ.
ನಗಿಸುವ ಗೆಳೆಯ:
ಕಚೇರಿ ತೆರೆದ ಮಾತ್ರಕ್ಕೆ ಕೆಲಸ ರಾಶಿ ಬೀಳುವುದೇ? ಕರೆಂಟ್ ಬಿಲ್ ಕಟ್ಟದ ಕಾರಣಕ್ಕೆ ಲೈನ್‌ಮನ್ ಆಗಾಗ ಫ್ಯೂಸ್ ಕಿತ್ತಿಡುತ್ತಾನೆ. ಇವರು ಮತ್ತೆ ಜೋಡಿಸಿಕೊಳ್ಳುತ್ತಾರೆ. ಇದನ್ನು ಗಮನಿಸಿ ಆತ ಫ್ಯೂಸ್ ಒಯ್ಯುತ್ತಾನೆ. ನಾಯಕಿ ದೀಪಾ ಬಿಲ್ ಪಾವತಿಸಿ, ಮತ್ತೆ ನಾಯಕನ ಬದುಕು ಬೆಳಗುವಂತೆ ಮಾಡುತ್ತಾಳೆ. ಮಗಳನ್ನು ಮದುವೆಯಾಗು, ನನ್ನದೇ ಒಂದು ಆಫೀಸ್ ನೋಡಿಕೊಂಡಿರು ಎಂದು ಹೇಳುವ ಹುಡುಗಿಯ ಅಪ್ಪನ ಮಾತನ್ನು ಸ್ವಾಭಿಮಾನಿ ಪ್ರವೀಣ ತಿರಸ್ಕರಿಸುವ ಪ್ರವೀಣ ಇದನ್ನು ಒಪ್ಪಿಕೊಳ್ಳುವನೇ? ಆದರೆ, ನಿಮ್ಮಿಬ್ಬರ ನಡುವೆ ಮುಚ್ಚಿದ ಬಾಗಿಲಿನ ಹಿಂದೆ ಆಗಿರುವ ಮಾತುಕತೆ ನನಗೇನು ಗೊತ್ತು? ಕರೆಂಟಿಲ್ಲದೆ ಹೇಗೆ ಎಡಿಟರ್ ಆಗ್ತೀಯಾ ಎಂದು ನಾಯಕಿ ಪ್ರಶ್ನಿಸುತ್ತಾಳೆ. ಆಕೆಯ ಪ್ರೀತಿ ನಿಷ್ಕಪಟವೆಂಬುದು ಅರ್ಥವಾಗಿ ಪ್ರವೀಣ ಸಮ್ಮತಿಸುತ್ತಾನೆ.
ಈ ನಡುವೆ ಫೇಲಾದ ಗೆಳೆಯನಿಗೆ ಪ್ರವೀಣ ಆಶ್ರಯ ಕೊಡುತ್ತಾನೆ. ಆತನಿಂದಲೇ ಕೆಲಸ ಕೆಡುತ್ತದೆ, ಆದರೂ ಸುಖ-ದುಃಖ ಎರಡನ್ನೂ ಇಬ್ಬರೂ ಹಂಚಿಕೊಳ್ಳುತ್ತಾರೆ. ಆ ಗೆಳೆಯನಿಗೋ ಪದಗಳನ್ನು ಹೇಳುವಾಗ ಅಕ್ಷರಗಳು ಅದಲು ಬದಲಾಗುವ ಸಮಸ್ಯೆ (ಉದಾ: ಹಾರ್ಡ್ ಡಿಕ್ಸ್). ಆತನ ಪದಪ್ರಯೋಗಗಳೇ ಹಲವು ಕಡೆಗಳಲ್ಲಿ ಅನಾಯಾಸವಾಗಿ ನಗು ಉಕ್ಕಿಸುತ್ತವೆ. ಮದುವೆ ಮನೆಯಲ್ಲಿ ಲಾಡುಗಳ ಫೋಟೋ ತೆಗೆಯುವ ದೃಶ್ಯದ ಆ ಕಲ್ಪನೆ ಹೇಗೆ ಹೊಳೆಯಿತೋ ದೇವನೇ ಬಲ್ಲ! ಅದನ್ನು ನೋಡಿಯೇ ಆನಂದಿಸಬೇಕು.
ಚೇತೋಹಾರಿ ದೃಶ್ಯಗಳು:
ವಾಸ್ತವಕ್ಕೆ ತೀರಾ ಹತ್ತಿರವಾದ, ನಮ್ಮ ಬದುಕಿನಲ್ಲೇ ಹಿಂದೆಂದೋ ಸಂಭವಿಸಿದ ಘಟನೆಗಳಿವು ಎನ್ನಿಸುವಂತಹ ದೃಶ್ಯಗಳಿಂದಲೇ ಚಿತ್ರವು ಸಮೃದ್ಧವಾಗಿದೆ. ಕಾಲೇಜಿನ ದೃಶ್ಯಗಳು ಲೈವ್ಲಿಯಾಗಿವೆ. `ನಮ್ಗೆ ನಮ್ ಕ್ಲಾಸ್ ಒಂದು ಬಿಟ್ಟು ಬೇರೆ ಎಲ್ಲ ಕ್ಲಾಸ್‌ಗಳಲ್ಲೂ ಫಿಗರ್‌ಗಳು ಕಾಣ್ತಾವೆ’ (ಯಾಕೋ ಶಿಷ್ಯಾ ಹಾಡು. ಕೊನೆಗೆ ಹುಡುಗೀರಿಗೂ ಹೀಗೇ ಅನ್ಸುತ್ತಾ ಎಂದು ಪ್ರಶ್ನಿಸುವುದೂ, ಅದಕ್ಕೆ ಉತ್ತರವನ್ನೂ ಹಾಡಿನ ಚರಣದ ಮೂಲಕವೇ ಕೊಡುವುದೂ ಚೂಟಿಯಾಗಿದೆ.
ಈ ಹಾಡಲ್ಲಿ ಬರುವ ಸುಂದರಿಯನ್ನು ಚಿತ್ರದ ನಾಯಕಿ ಎಂದು ತಪ್ಪು ತಿಳಿದುಕೊಂಡರೆ ನಾವು ಹೊಣೆಯಲ್ಲ!) ಹಾಗೂ ನ್ಯಾಕ್ ತಂಡ ಬರುವಾಗ ಕಾಲೇಜಿನ ಶ್ರೇಷ್ಠತೆಯನ್ನು ಬಿಂಬಿಸುವ ವೀಡಿಯೋ ಮಾಡಿಕೊಟ್ಟರೂ, ಅಟೆಂಡೆನ್ಸ್ ಕಮ್ಮಿಯಿರುವ ಕಾರಣಕ್ಕೆ ಪರೀಕ್ಷೆ ಹಾಲ್ ಟಿಕೆಟ್ ಕೊಡಬೇಕಿದ್ದರೆ 5,000 ರೂ. ಫೈನ್ ಕಟ್ಟು ಎಂದು ಪ್ರಾಂಶುಪಾಲರು ಖಡಾಖಂಡಿತವಾಗಿ ಹೇಳಿದಾಗ, ಕಾಲೇಜಿನ ವಾಸ್ತವ ಸ್ಥಿತಿಯನ್ನು ಬಿಂಬಿಸುವ ಮತ್ತೊಂದು ವೀಡಿಯೋ ಹರಿಬಿಟ್ಟು ಡಿಬಾರ್ ಆಗುವ ತುಂಟ ಪ್ರವೀಣ ಕಠಿಣ ಪರಿಶ್ರಮದಿಂದಲೇ ಯಶಸ್ವಿ ಎಡಿಟರ್ ಆಗಿ, ನಿರ್ದೇಶಕರೊಬ್ಬರು ಅಪಘಾತದಲ್ಲಿ ತೀರಿಕೊಳ್ಳುವ ಮುನ್ನ ಅರ್ಧ ಮುಗಿಸಿದ್ದ ಚಿತ್ರವನ್ನು ನಿರ್ದೇಶಕನಾಗಿಯೂ ಪೂರ್ಣಗೊಳಿಸುವತನಕ, ಬೆಳೆಯುವ ಪ್ರವೀಣನ ಜರ್ನಿ ಆಹ್ಲಾದಕರವಾಗಿದೆ, ಚಿತ್ರವು ಅಪ್ಡೇಟ್ ಆಗಿದೆ.
ಆಲ್ ಓಕೆ ಅವರು ಗೂಡಂಗಡಿ ರಾಮಣ್ಣ ಹಾಡನ್ನು ಈ ಚಿತ್ರಕ್ಕಾಗಿ ಹಾಡಿದ್ದು, ಕಾಲು ಕುಣಿಸುವಂತಿದೆ. `ಕನಸಲ್ಲೂ ಕಾಣದ’ ರೊಮ್ಯಾಂಟಿಕ್ ಹಾಡು ಕಿವಿಗಿಂಪಾಗಿದೆ. ಮಾತು ಮಾತಿಗೆ `ಬೊಜ್ಜ’ ಎನ್ನುತ್ತ ಬಯ್ಯುವ, ಬಿಲ್ಡಪ್ ಪ್ರೊಫೆಸರ್ ಪಾತ್ರದಲ್ಲಿ ರಾಮನಾಥ ಲೋಂಢೆ ರಂಜಿಸುತ್ತಾರೆ. ಚಿತ್ರದ ಸಂಭಾಷಣೆ ನವಿರಾಗಿದೆ. ಪವನ್ ಭಟ್ ಪೆನ್ನಲ್ಲಿ ಪ್ರವೀಣನ ಸೈಕಲ್, ಅಂಕಲ್ ಹಳೆ ಕಾರು ಕೂಡ ಪಾತ್ರಗಳಾಗುವುದು ವಿಶೇಷ. ನಾಯಕ ಪ್ರವೀಣ್ ಇಲ್ಲಿ ಸಂಗೀತ ನಿರ್ದೇಶಕರೂ ಆಗಿ, ಚಿತ್ರವೊಂದಕ್ಕೆ ಸಂಗೀತ ಹೇಗೆ ರಸಪಾಕದಂತಿರಬೇಕೆಂದು ತೋರಿಸಿಕೊಟ್ಟಿದ್ದಾರೆ.
ಸದ್ಯ ಬೆಂಗಳೂರು ಮತ್ತು ಕಾರ್ಕಳದ ಥಿಯೇಟರ್‌ಗಳಲ್ಲಿ ಮಾತ್ರ ಉಳಿದಿರುವ ಈ ಚಿತ್ರ ಶೀಘ್ರದಲ್ಲೇ ಒಟಿಟಿಯಲ್ಲಿ ವೀಕ್ಷಿಸಲು ಸಿಗುವ ನಿರೀಕ್ಷೆಯಿದೆ. ಆಗಲಾದರೂ ಮರೆಯದೇ ನೋಡಿ.