ವಿಜಯಸಾಕ್ಷಿ ಸುದ್ದಿ, ನರಗುಂದ
ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ ಗೂರ್ಖಾ ಮೇಲೆ ನಾಲ್ಕೈದು ಜನರ ಇದ್ದ ತಂಡ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ
ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಬೆಳಗಿನ ಜಾವ ನಡೆದಿದೆ.
ನೇಪಾಳ ಮೂಲದ ನರ್ಸಿಂಗ್ ಹರೀಶಸಿಂಗ್ ಸೌಧ್ ಎಂಬ (60) ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ.
ಮಾರುಕಟ್ಟೆ ಪ್ರದೇಶದಲ್ಲಿ ಅಂಗಡಿ ಕಳ್ಳತನ ಮಾಡುವುದನ್ನು ತಡೆಯಲು ಮುಂದಾಗಿದ್ದಕ್ಕೆ ದುಷ್ಕರ್ಮಿಗಳು ರಾಡ್ ಸೇರಿದಂತೆ ಮಾರಾಕಾಸ್ತ್ರಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ತೀವ್ರ ಗಾಯಗೊಂಡ ಗೂರ್ಖಾನನ್ನು ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.
ನರ್ಸಿಂಗ್ ಹರೀಶಸಿಂಗ್ ಸೌದ್ ಕಳೆದ 40 ವರ್ಷಗಳಿಂದ ಪಟ್ಟಣದಲ್ಲಿ ರಾತ್ರಿ ವೇಳೆ ಗಸ್ತು ತಿರುಗುತ್ತಿದ್ದ.
ಸುದ್ದಿ ತಿಳಿದ ವ್ಯಾಪಾರಸ್ಥರು ಮಾರುಕಟ್ಟೆ ಪ್ರದೇಶದಲ್ಲಿ ಜಮಾವಣೆಗೊಂಡಿದ್ದು, ಪದೇ ಪದೇ ಕಳ್ಳತನ ಪ್ರಕರಣ ನಡೆಯುತ್ತಿದ್ದರೂ ಕಳ್ಳರನ್ನು ಹಿಡಿಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.