ವಿಜಯಸಾಕ್ಷಿ ಸುದ್ದಿ, ಗದಗ
ಕಾಂಗ್ರೆಸ್ ಕಾರ್ಯಕರ್ತ ಕಾರ್ತಿಕ್ ಗುಜಮಾಗಡಿ ಹಾಗೂ ಆತನ ಸಹಚರ ಇಬ್ಬರು ಸೇರಿ ಬಿಜೆಪಿ ಕಾರ್ಯಕರ್ತ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಶಾಖಾ ಮುಖ್ಯ ಶಿಕ್ಷಕ ಪಂಚಾಕ್ಷರಿ ಅಂಗಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಗದಗ ನಗರದ ರಾಚೋಟೇಶ್ವರ ನಗರದ ಒಕ್ಕಲಗೇರಿ ಓಣಿಯ ಸಿಟಿಜನ್ ಶಾಲೆಯ ಹತ್ತಿರವಿರುವ ಬಿಜೆಪಿ ಕಾರ್ಯಕರ್ತ ಪಂಚಾಕ್ಷರಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಹಲ್ಲೆ ಮಾಡಿರುವ ಆರೋಪಿಗಳು ಪಂಚಾಕ್ಷರಿ ಅವರ ಮನೆಯೊಳಗೆ ಹೋಗಿ ಹೊರಗೆ ಎಳೆದುಕೊಂಡು ಬಂದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಯಾವ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂಬುವುದು ಇನ್ನೂ ತಿಳದು ಬಂದಿಲ್ಲ. ಆದರೆ, ಒಂದು ವಿಡಿಯೋ ಶೇರ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗದಗ ಶಹರ ಪೊಲೀಸ್ ಠಾಣೆಯಲ್ಲಿ ಜಮಾಯಿಸದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಲ್ಲೆ ನಡೆಸಿದವರನ್ನು ಬಂಧಿಸುವವರೆಗೂ ನಾವು ಠಾಣೆಯಿಂದ ಹೊರ ಹೋಗುವುದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ, ರಾಜು ಕುರುಡಗಿ, ರಾಘವೇಂದ್ರ ಯಳವತ್ತಿ, ಅನಿಲ ಅಬ್ಬಿಗೇರಿ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.
ಹಲ್ಲೆ ಮಾಡಿರುವ ಕಾರ್ತಿಕ್ ಗುಜುಮಾಗಡಿಗೆ ಜಿ.ಪಂ. ಮಾಜಿ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ್ ಅವರ ಕುಮ್ಮಕ್ಕು ಇದೆ ಆರೋಪಿಸಿರುವ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿರುವ ಆರೋಪಿಗಳನ್ನು ತಕ್ಷಣ ಬಂಧಿಸಲು ಪೊಲೀಸರಿಗೆ ಆಗ್ರಹಿಸಿದ್ದಾರೆ.