ವಿಜಯಸಾಕ್ಷಿ ಸುದ್ದಿ, ವಿಜಯನಗರ
ಜಿಲ್ಲೆಯ ಹೊಸಪೇಟೆಯಲ್ಲಿ ಮಹಾಮಾರಿಯಿಂದಾಗಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಒಂದೇ ದಿನದ ಅಂತರದಲ್ಲಿ ಅಕ್ಕ ಹಾಗೂ ತಮ್ಮನನ್ನು ಈ ಹೆಮ್ಮಾರಿ ಬಲಿ ಪಡೆದಿದೆ. ಕೋವಿಡ್ ನಿಂದ ಬಳಲುತ್ತಿದ್ದ ಅಕ್ಕ – ತಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಒಂದೇ ದಿನದ ಅಂತರದಲ್ಲಿ ಸಾವನ್ನಪ್ಪಿದ್ದಾರೆ.
ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್(45) ಹಾಗೂ ಅವರ ತಮ್ಮ ಸಾವಿಯೋ ಸ್ಮಿತ್(42) ಇಬ್ಬರು ಮಹಾಮಾರಿಗೆ ಬಲಿಯಾದ ದುರ್ದೈವಿಗಳು. ಇಬ್ಬರಲ್ಲಿಯೂ ಇತ್ತೀಚೆಗೆ ಸೋಂಕು ಇರುವುದು ದೃಢವಾಗಿತ್ತು. ಹೀಗಾಗಿ ಇಬ್ಬರೂ ಕಳೆದ 8 ದಿನಗಳಿಂದ ಬಳ್ಳಾರಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಮ್ಮ ಸಾವಿಯೋ ಸ್ಮಿತ್ ನಿನ್ನೆ ನಿಧನರಾಗಿದ್ದರು. ತಮ್ಮನ ಹಿಂದೆಯೇ ಅಕ್ಕ ಹಾಗೂ ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಕ್ಯಾರೋಲಿನ್ ಲೂಸಿಯಾ ಸ್ಮಿತ್ ಅವರು ಕೂಡ ಇಂದು ಸಾವನ್ನಪ್ಪಿದ್ದಾರೆ. ಕ್ಯಾರೋಲಿನ್ ಲೂಸಿಯಾ ಸ್ಮಿತ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇದರೊಂದಿಗೆ ಹೊಸಪೇಟೆಯ ಜನನಿ ಮಹಿಳಾ ಸಬಲೀಕರಣ ಸಂಘಟನೆಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದರು. ಹೊಸಪೇಟೆ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕೋವಿಡ್ ಸಮೀಕ್ಷೆ ಕಾರ್ಯದಲ್ಲಿ ಸ್ವಯಂ ಸೇವಕಿಯಾಗಿ ಕಾರ್ಯ ನಿರ್ವಹಿಸಿದ್ದರು.