ವಿಜಯಸಾಕ್ಷಿ ಸುದ್ದಿ, ಶಿವಮೊಗ್ಗ
ಬಿಜೆಪಿಗೆ ಅಧಿಕಾರ ಬಂದರೆ ಐದು ವರ್ಷ ಸಂಪೂರ್ಣಗೊಳಿಸಲು ರೋಗ ಬಂದಿರುತ್ತದೆ ಎಂದು ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಖಾಲಿ ರೋಗವಿದ್ದರೆ. ಕಾಂಗ್ರೆಸ್ ನಲ್ಲಿ ಹೆಮ್ಮಾರಿ ಕ್ಯಾನ್ಸರ್ ರೋಗವಿದೆ. ಕಾಂಗ್ರೆಸ್ ಪಕ್ಷವು ಹುಳುಕುಗಳಿಂದಲೇ ಕೂಡಿದೆ. ಕಾಂಗ್ರೆಸ್ ಸರ್ಕಾರದ ಇತಿಹಾಸ ನೋಡಿದರೆ ಮೂರು ಮೂರು ಜನ ಸಿಎಂ ಆಗಿರುವ ಉದಾಹರಣೆಗಳಿವೆ.
ವೀರೇಂದ್ರ ಪಾಟೀಲ್ ಅವರಂತಹ ಪ್ರಾಮಾಣಿಕ ವ್ಯಕ್ತಿ ಸಿಎಂ ಆಗಿದ್ದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿಯೇ ಅವರಿಂದ ರಾಜೀನಾಮೆ ಪಡೆದ ಕೆಟ್ಟ ಪಕ್ಷ ಅದು ಎಂದು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಸಿದ್ದರಾಮಯ್ಯ ಅವರ ಸಮಯದಲ್ಲಿಯೇ ಹೆಚ್ಚಾಗಿತ್ತು. ಅದರ ಫಲಿತಾಂಶವೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸುವಂತಾಯಿತು.
2019ರ ಲೋಕಸಭೆ ಸಂದರ್ಭದಲ್ಲಿಯೂ ಕಾಂಗ್ರೆಸ್ ಹೀನಾ ಸ್ಥಿತಿ ಅನುಭವಿಸಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಗೆಲುವು ಸಾಧಿಸಿತು ಎಂದು ಆರೋಪಿಸಿದ್ದಾರೆ.
ಸದ್ಯ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲೊಬ್ಬ ಸಚಿವ ಮಾತನಾಡಿದರೆ, ಅದನ್ನು ರೋಗ ಎನ್ನುವುದಾದರೆ, ಕಾಂಗ್ರೆಸ್ ಗೆ ಕ್ಯಾನ್ಸರ್ ರೋಗವೇ ಇದ್ದಂತಾಗಿದೆ. ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆನೇ ಇಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು ಅಧಿಕಾರದಿಂದ ಕೆಳಗೆ ಇಳಿಯಲು ಕಾಂಗ್ರೆಸ್ ಪಕ್ಷವೇ ಕಾರಣ ಎಂದು ವಾಗ್ದಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರ ಅಧಿಕಾರವಧಿಯ ಸಂದರ್ಭದಲ್ಲಿ ಸೆಕ್ಸ್ ಸ್ಕ್ಯಾಂಡಲ್ ಪ್ರಕರಣ ಬೆಳಕಿಗೆ ಬಂದಾಗ ಅವರು ಏನು ಮಾಡಿದರು? ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿದ್ದಾಗ ಬಚಾವ್ ಮಾಡುವ ಕೆಲಸ ಮಾಡಿದರು. ಇದನ್ನು ಅವರು ಬಹಿರಂಗವಾಗಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಸಚಿವರು ಹಾಗೂ ಶಾಸಕರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಜನರು ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನ ಡಿಕೆಶಿ ಮತ್ತು ಸಿದ್ದರಾಮಯ್ಯ ವಿನಾಕಾರಣ ತಪ್ಪು ಹುಡುಕುವ ಕೆಲಸ ಮಾಡುತ್ತಿದ್ದಾರೆ. ವ್ಯಾಕ್ಸಿನ್ ಆರಂಭಿಸಿದ ಸಂದರ್ಭದಲ್ಲಿ ವ್ಯಾಕ್ಸಿನ್ ಹಾಕಿಕೊಳ್ಳಬೇಡಿ ಎಂದು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ಹಾಗೆ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಮೇಲೆ ಆಣೆ ಮಾಡಿ ಹೇಳಲಿ ಎಂದು ಗುಡುಗಿದ್ದಾರೆ.
ಜಯರಾಂ ರಮೇಶ್, ಕರ್ನಾಟಕದ ಉಸ್ತುವರಿ ಆಗಿದ್ದ ವೇಣುಗೋಪಾಲ್ ಸೇರಿದಂತೆ ಎಲ್ಲ ಕಾಂಗ್ರೆಸ್ ನಾಯಕರು ವ್ಯಾಕ್ಸಿನ್ ಕುರಿತು ಟೀಕೆ ಮಾಡಿದ್ದರು. ಹೀಗಾಗಿ ದೇಶದಲ್ಲಿ ಕೋವಿಡ್ ಹೆಚ್ಚಾಗಲು ಕಾಂಗ್ರೆಸ್ ನಾಯಕರೇ ಕಾರಣ. ಆದರೆ, ಸದ್ಯ ಇದೇ ಕಾಂಗ್ರೆಸ್, ಆ ರೋಗ ಈ ರೋಗವೆಂದು ನಿಧಾನವಾಗಿ ಹುಡುಕುವ ಕೆಲಸದಲ್ಲಿ ತೊಡಗಿದೆ. ಇಂದಲ್ಲ, ನಾಳೆ ಈ ಕಾಂಗ್ರೆಸ್ ನಿಧಾನವಾಗಿ ಸಾಯುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.