ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ
ಜಿಲ್ಲೆಯಲ್ಲಿ ನಡೆದಿದ್ದ ಆಕ್ಸಿಜನ್ ದುರಂತ ಸರ್ಕಾರ ಮಾಡಿರುವ ಕೊಲೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿ ರೂ. 10 ಲಕ್ಷ ಪರಿಹಾರ ನೀಡಿದ್ದಾರೆ. ಆದರೆ, ಇಲ್ಲಿ ರೂ. ಎರಡು ಲಕ್ಷ ಕೊಟ್ಟು, ಕೇಂದ್ರ ಸರ್ಕಾರದ ರೂ. ನಾಲ್ಕು ಲಕ್ಷ ವಾಪಾಸ್ ಪಡೆದಿದೆ.
ಇಲ್ಲಿಯವರೆಗೂ ಈ ದುರಂತದ ಬಗ್ಗೆ ಯಾರ ಮೇಲೆಯೂ ಕ್ರಮ ಕೈಗೊಂಡಿಲ್ಲ. ಇಲ್ಲಿ ಯಾವ ರಾಜಕಾರಣಿ, ಮಂತ್ರಿ ಕೂಡ ಲೆಕ್ಕಕ್ಕೆ ಇಲ್ಲದಾಗಿದೆ. ಈ ಘಟನೆಗೆ ತಪ್ಪಿತಸ್ಥರ ಮೇಲೆ ಕ್ರಮವಾಗಿಲ್ಲ. ಬದಲಿಗೆ ಜನಸಾಮಾನ್ಯರ ತಲೆ ದಂಡವಾಗಿದೆ. ಇಲ್ಲಿಯವರೆಗೂ ಮೃತರ ಮನೆಗೆ ಸಿಎಂ, ಮಂತ್ರಿಗಳು ಸೇರಿದಂತೆ ಯಾವೊಬ್ಬ ಬಿಜೆಪಿ ಮುಖಂಡರು ಕೂಡ ಭೇಟಿ ನೀಡಿ ಕಷ್ಟ ಆಲಿಸುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಎಲ್ಲರೂ ಬೆಂಗಳೂರಿನಲ್ಲಿ ಕುಳಿತು ಪಾಲು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಯಾರೂ ಇಲ್ಲಿಗೆ ಬಂದು ನೋಡುವ ಕೆಲಸ ಮಾಡಿಲ್ಲ. ನಾವು ನೋಡಿ ನೋಡಿ ಕಾದು ನಂತರ ಈಗ ಕೊವೀಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮೂವತ್ತು ಸಾವಿರ ಮಂದಿ ಕೊವೀಡ್ ಗೆ ತುತ್ತಾಗಿದ್ದಾರೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಮಾಹಿತಿಯಂತೆ 3 ಲಕ್ಷ ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ರಾಜ್ಯದ್ಯಂತ ನಮ್ಮ ಕಾರ್ಯಕರ್ತರಿಂದ ಮಾಹಿತಿ ಪಡೆದು ಆಯಾ ಜಿಲ್ಲಾಧಿಕಾರಿ, ತಹಸೀಲ್ದಾರ್ ಗೆ ಅರ್ಜಿ ಸಲ್ಲಿಸುವ ಕೆಲಸ ಮಾಡುತ್ತೇವೆ ಎಂದು ಗುಡುಗಿದ್ದಾರೆ.
ಸಿಎಂಗೆ ಕುರ್ಚಿ ಬಹಳ ಮುಖ್ಯ. ಹೀಗಾಗಿ ಚಾಮರಾಜನಗರಕ್ಕೆ ಅವರು ಬಂದಿಲ್ಲ. ಈ ವೇಳೆ ಜನರ ಬಳಿ ಹೋದರೆ ರೊಚ್ಚಗೆದ್ದು, ಹೊಡೆಯುತ್ತಾರೆ ಎನ್ನುವ ಭಯವಿದೆ. ಇಂಟೆಲಿಜೆನ್ಸ್ ನವರಿಂದ ಮಾಹಿತಿ ಪಡೆದು ಭಯದಿಂದ ಅವರು ಜನರ ಬಳಿ ಹೋಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.