ವಿಜಯಸಾಕ್ಷಿ ಸುದ್ದಿ, ತಿರುವನಂತಪುರಂ
ಕೋವಿಡ್ ನಿರ್ವಹಣೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಕೇರಳ ಸಚಿವೆ ಶೈಲಜಾ ಅವರು ಈಗ ಮತ್ತೊಂದು ದಾಖಲೆ ಬರೆದಿದ್ದಾರೆ.
ಕೇರಳ ರಾಜ್ಯವು ಈ ಹಿಂದೆ ಕೋವಿಡ್ ನಿಯಂತ್ರಣ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಉತ್ತಮವಾಗಿ ನಿರ್ವಹಣೆ ಮಾಡಿ, ಜನರ ಪ್ರಾಣ ಉಳಿಸಿದ್ದ ಅಲ್ಲಿನ ಆರೋಗ್ಯ ಸಚಿವೆ ಕೆ.ಶೈಲಜಾ ಅವರನ್ನು ಸಾಕಷ್ಟು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಕೂಡ ಹುಡುಕಿಕೊಂಡು ಬಂದಿದ್ದವು. ಅಲ್ಲದೇ, ಅವರ ಕಾರ್ಯ ವೈಖರಿ ಎಲ್ಲೆಡೆ ಪ್ರಶಂಸನೀಯವಾಗಿತ್ತು.
ಸದ್ಯ ಈ ವಿಧಾನಸಭಾ ಚುನಾವಣೆಯಲ್ಲಿಯೂ ಅತಿ ಹೆಚ್ಚಿನ ಮತಗಳ ಅಂತರದಿಂದ ಶೈಲಜಾ ಅವರು ಗೆದ್ದು ಬೀಗಿದ್ದಾರೆ.
ಕಣ್ಣೂರು ಜಿಲ್ಲೆಯ ಮಟ್ಟನ್ನೂರು ಕ್ಷೇತ್ರದಲ್ಲಿ ಶೈಲಜಾ ಟೀಚರ್ ಎಂದೇ ಖ್ಯಾತರಾಗಿರುವ ಕೆ. ಕೆ. ಶೈಲಜಾ 60,963 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದಾರೆ.
ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿಯೇ ಇಷ್ಟೊಂದು ಅಂತರದಲ್ಲಿ ಯಾವೊಬ್ಬ ಅಭ್ಯರ್ಥಿಯೂ ಗೆಲುವು ಸಾಧಿಸಿಲ್ಲ. 64 ವರ್ಷದ ಶೈಲಜಾ ಅವರು ಕೇರಳ ವಿಧಾನಸಭೆ ಚುನಾವಣೆಯಲ್ಲಿ ಎಲ್ ಡಿಎಫ್ ನ ಸ್ಟಾರ್ ಕ್ಯಾಂಪೇನರ್ ಆಗಿದ್ದರು.
23 ವರ್ಷಗಳ ಕಾಲ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ ಅವರು, 2004ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು.
ಶೈಲಜಾ ಅವರು ಸಿಪಿಐ(ಎಂ)ನ ಯುವ ಘಟಕವಾದ ಡಿವೈಎಫ್ ಐನ ನಿವೃತ್ತ ಸದಸ್ಯರಾಗಿದ್ದಾರೆ. 2016ರಲ್ಲಿ ಮೊದಲ ಬಾರಿಗೆ ಚುನಾವಣೆ ಗೆದ್ದ ಅವರು ಸಚಿವರಾಗಿದ್ದರು.