ವಿಜಯಸಾಕ್ಷಿ ಸುದ್ದಿ, ಗಾಜಿಪುರ
ಕೊರೊನಾದಿಂದಾಗಿ ದೇಶದ ಜನರು ಸಾಕಷ್ಟು ಸಂಕಷ್ಟ ಪಡುತ್ತಿದ್ದಾರೆ. ಹಲವರು ಶವಗಳನ್ನು ಅಂತ್ಯ ಸಂಸ್ಕಾರ ಮಾಡಲು ಆಗದೆ, ಗಂಗಾ ನದಿಯಲ್ಲಿ ತೇಲಿ ಬಿಟ್ಟ ಮಾಹಿತಿಯೂ ತಿಳಿದು ಬಂದಿತ್ತು. ಕಳೆದ ತಿಂಗಳವಷ್ಟೇ ನೂರಾರು ಶವಗಳು ತೇಲಿ ಬಂದಿದ್ದವು. ಇದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಸದ್ಯ ಗಂಗೆಯಲ್ಲಿ ನವಜಾತು ಶಿಶುವೊಂದು ತೇಲಿ ಬಂದಿರುವ ಕುರಿತು ವರದಿಯಾಗಿದೆ.
ಬುಧವಾರ ಮರದ ಪೆಟ್ಟಿಗೆಯೊಂದು ತೇಲಿ ಬಂದಿದ್ದು, ಇದರಲ್ಲಿ 22 ದಿನಗಳ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ ಎನ್ನಲಾಗಿದೆ. ಗಾಜಿಪುರದ ದಾದ್ರಿ ಘಾಟ್ ನಲ್ಲಿ ದೋಣಿ ನಡೆಸುತ್ತಿದ್ದ ನಾವಿಕನಿಗೆ ಈ ಪೆಟ್ಟಿಗೆ ಹಾಗೂ ಅದರಲ್ಲಿದ್ದ ಮಗು ಸಿಕ್ಕಿದೆ. ಗಂಗಾ ನದಿಯಲ್ಲಿ ಮರದ ಪೆಟ್ಟಿಗೆಯಲ್ಲಿ ಪತ್ತೆಯಾಗಿರುವ ನವಜಾತ ಶಿಶುವಿನ ಸಂಪೂರ್ಣ ಜವಾಬ್ದಾರಿಯನ್ನು ಉತ್ತರ ಪ್ರದೇಶ ಸರ್ಕಾರ ವಹಿಸಿಕೊಂಡಿದೆ ಎನ್ನಲಾಗಿದೆ.
ಈ ಹೆಣ್ಣು ಶಿಶುವನ್ನು ಉಳಿಸಿದ ನಾವಿಕನಿಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ಧನ್ಯವಾದ ಅರ್ಪಿಸಿದ್ದಾರೆ. ಇದರೊಂದಿಗೆ ನಾವಿಕನಿಗೆ ವಸತಿ ಸೌಕರ್ಯ ನೀಡುವುದಾಗಿ ಹೇಳಿದ್ದಾರೆ. ಮರದ ಪೆಟ್ಟಿಗೆಯಲ್ಲಿ ದುಪ್ಪಟ್ಟಾದಲ್ಲಿ ಸುತ್ತಿದ್ದ ನವಜಾತ ಶಿಶುವಿನೊಂದಿಗೆ, ದೇವರ ಪೋಟೋಗಳು, ಪೂಜಾ ಸಾಮಗ್ರಿಗಳು ಮತ್ತು ಮಗುವಿನ ಕುಂಡಲಿ, ಜಾತಕ ಪತ್ತೆಯಾಗಿವೆ. ಶಿಶುವಿನ ಹೆಸರನ್ನು ಜಾತಕದಲ್ಲಿ ಗಂಗಾ ಎಂದು ಬರೆಯಲಾಗಿದ್ದು, ಜಾತಕದಲ್ಲಿ ಮಗುವಿನ ವಯಸ್ಸು ಕೇವಲ ಮೂರು ವಾರಗಳು ಎಂದು ಬರೆಯಲಾಗಿದೆ ಎಂದು ತಿಳಿದು ಬಂದಿದೆ.