ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಬಡ್ಡಿ ಮಾಫಿಯಾಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಸಂಗವ್ವ ಮೆಣಸಿನಕಾಯಿ (45) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದವರು.
ಶ್ರೀಶೈಲಪ್ಪ ಚಕ್ರಣ್ಣವರ್ ಮತ್ತು ಈಕೆಯ ಪತ್ನಿ ಯಶೋಧಾ ಚಕ್ರಣ್ಣವರ ಮತ್ತು ಮಂಜುನಾಥ್ ಹಿರೇಮಠ ಎಂಬುವರು ಸಂಗವ್ವ ಮೆಣಸಿನಕಾಯಿ ಪತಿ ಈರಪ್ಪನಿಗೆ ಬಡ್ಡಿ ರೂಪದಲ್ಲಿ ಹಣ ನೀಡಿದ್ದರು. ಅದಕ್ಕಾಗಿ ಮೂರು ಎಕರೆ ಜಮೀನನ್ನು ಅಡ ಇಡಲಾಗಿತ್ತು. ಅಡ ಇಟ್ಟಿದ್ದ ಜಮೀನನ್ನು ಶ್ರೀಶೈಲಪ್ಪ ಚಕ್ರಣ್ಣವರ ಬೇರೆ ಯವರಿಗೆ ಮಾರಿದ್ದಾರೆ.
ಜಮೀನನ್ನು ಮೋಸದಿಂದ ಕಿತ್ತುಕೊಂಡಿದ್ದು, ಹಾಗೂ ಹಣ ಕೊಡುವಂತೆ ಬೆದರಿಕೆ ಹಾಕಿದ್ದರಿಂದ ನೊಂದಿದ್ದ ಸಂಗವ್ವ ಮೆಣಸಿನಕಾಯಿ ಶನಿವಾರ ಸೀಮೆ ಎಣ್ಣೆ ಮೈಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ತೀವ್ರ ಗಾಯಗೊಂಡಿದ್ದ ಸಂಗವ್ವ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಸಂಜೆ ಮೃತಪಟ್ಟಿದ್ದಾರೆ.
2015 ರಲ್ಲಿ ಮೃತ ಸಂಗವ್ವಳ ಪತಿ ಈರಪ್ಪನಿಗೆ ಶ್ರೀಶೈಲಪ್ಪ ಚಕ್ರಣ್ಣವರ ಸುಮಾರು 5 ಲಕ್ಷ ರೂ. ಬಡ್ಡಿ ಸಾಲ ಕೊಟ್ಟಿದ್ದರು. ಬಡ್ಡಿ ಸಾಲಕ್ಕೆ ಪ್ರತಿಯಾಗಿ ತಮ್ಮ ಹೊಲವನ್ನು ಕಬ್ಜಾಕ್ಕೆ ಪಡೆದಿದ್ದರು. ಕಬ್ಜಾಕ್ಕೆ ಪಡೆಯುವಾಗ ಸಹಿ ಮಾಡಿಸಿಕೊಂಡಿದ್ದನ್ನೇ ಬಳಸಿಕೊಂಡು 3 ಎಕರೆ ಜಮೀನನ್ನು ಬೇರೆಯವರಿಗೆ ಮಾರಿದ್ದಾರೆ. ಪಹಣಿ ಪತ್ರದಲ್ಲಿ ಬೇರೆಯವರ ಹೆಸರು ದಾಖಲಾಗಿದೆ.
ಬಡ್ಡಿ ವ್ಯವಹಾರ ದಲ್ಲಿ ಮೋಸ ಮಾಡಿ ಜಮೀನನ್ನು ಬೇರೆ ಯವರಿಗೆ ಮಾರಿದ್ದರಿಂದ ಬೇಸತ್ತ ಸಂಗವ್ವ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ಗದಗ ಗ್ರಾಮೀಣ ಠಾಣೆಯಲ್ಲಿ ಮೃತಳ ಪತಿ ಈರಪ್ಪ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.