ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ದೇಶದ ಮೊದಲ ಟಾಯ್ ಕ್ಲಸ್ಟರ್ ಭೂಮಿ ಪೂಜೆ ಸಮಾರಂಭ ಕೆಲ ಕಾಲ ಗೊಂದಲದ ಗೂಡಾಗಿ ಆತಂಕಕ್ಕೆ ಎಡೆ ಮಾಡಿಕೊಟ್ಟಿತು. ಇದಕ್ಕೆ ಕಾರಣ ಮಾಜಿ ಸಚಿವ ಬಸವರಾಜ ರಾಯರಡ್ಡಿ!
ಮಾಜಿ ಸಚಿವ ಆರ್.ವಿ.ದೇಶಪಾಂಡೆ ಭಾಷಣ ಮಾಡುವಾಗ ನನ್ನ ಗಂಟಲು ಸರಿ ಇಲ್ಲ. ಒಂದು ನಿಮಿಷ ಮಾತಾಡ್ತಿನಿ. ನನ್ನ ಭಾಷಣವನ್ನು ಶಾಸಕ ಮಿತ್ರ ಅಮರೇಗೌಡ ಬಯ್ಯಾಪುರ ಓದುತ್ತಾರೆ ಎಂದದ್ದೇ ತಡ.. ಕಸಿವಿಸಿಗೊಂಡ ಮಾಜಿ ಸಚಿವ ಬಸವರಾಜ ರಾಯರಡ್ಡಿ ನಾನು ಮಾತಾಡ್ತಿನಿ ಅಂತ ಎಲ್ಲಿ ಹೇಳಿದಿನಿ ಅಂತ ವಿನಾಕಾರಣ ತಗಾದೆ ತೆಗೆದು ವೇದಿಕೆ ಮೇಲೆ ಗೊಂದಲ ಸೃಷ್ಟಿಸಿದರು. ರಾಯರಡ್ಡಿ ಅವರ ಈ ವರ್ತನೆ ವೇದಿಕೆ ಮೇಲಿದ್ದವರಿಗೆ ಮುಜುಗರ ತಂದರೆ ವೇದಿಕೆ ಮುಂಭಾಗದಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಆಕ್ರೋಶ ತಂದಿತು.
ರಾಯರಡ್ಡಿ ಅವರ ಈ ವರ್ತನೆಯಿಂದ ಕೆಂಡಾಮಂಡಲರಾದ ಕಾರ್ಯಕರ್ತರು ಕಾರ್ಯಕ್ರಮದಿಂದ ಎದ್ದು ನಡಿ ಎಂದು ಕೂಗಿದರು. ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರು. ಜೊತೆಗೆ ರಾಯರಡ್ಡಿಗೆ ಧಿಕ್ಕಾರ ಎಂದು ಕೂಗಿದ ಕಾರ್ಯಕರ್ತರು ಶಾಸಕ ಹಾಲಪ್ಪ ಆಚಾರ್‌ಗೆ ಜೈಕಾರ ಹಾಕಿದರು.
ಒಟ್ಟಾರೆ ಸಿಎಂ ಸಮ್ಮುಖದಲ್ಲಿ ಈ ಗೊಂದಲ ಉಂಟಾಗಿದ್ದು, ಪೊಲೀಸರು ತಕ್ಷಣವೇ ಎಚ್ಚೆತ್ತುಕೊಂಡು ಪರಿಸ್ಥಿತಿ ತಿಳಿಗೊಳಿಸಿದರು.