ವಿಜಯಸಾಕ್ಷಿ ಸುದ್ದಿ, ಬೆಳಗಾವಿ
ಆದಷ್ಟು ಬೇಗ ಸಚಿವರಾಗುವ ಕನಸು ಕಾಣುತ್ತಿದ್ದ ಗೋಕಾಕ ಶಾಸಕ ರಮೇಶ ಜಾರಕಿಹೊಳಿಗೆ ಮತ್ತೊಂದು ಸಂಕಟ ಎದುರಾಗಿದೆ.
ಸಹಕಾರಿ ಕ್ರೆಡಿಕ್ ಬ್ಯಾಂಕ್ ಹೂಡಿದ್ದ ಚೆಕ್ ಬೌನ್ಸ್ ಪ್ರಕರಣವನ್ನು ಮರು ವಿಚಾರಣೆಗೆ ಅಂಗೀಕರಿಸುವಂತೆ ಧಾರವಾಡದ ಹೈಕೋರ್ಟ್ ಪೀಠ ಚಿಕ್ಕೋಡಿ ನ್ಯಾಯಾಲಯಕ್ಕೆ ಮಂಗಳವಾರ ಸೂಚನೆ ನೀಡಿದೆ.
ಕೋ ಆಪ್ರೇಟಿವ್ ಕ್ರೆಡಿಟ್ ಬ್ಯಾಂಕ್ಗೆ ಶಾಸಕ ರಮೇಶ ಜಾರಕಿಹೊಳಿ ನೀಡಿದ್ದ 5.2 ಕೋಟಿ ರೂ.ಚೆಕ್ ಬೌನ್ಸ್ ಆಗಿದ್ದ ಕುರಿತು ಚಿಕ್ಕೋಡಿ ನ್ಯಾಯಾಲಯದಲ್ಲಿ ದೂರು ದಾಖಲಾಗಿತ್ತು. ಆದರೆ ಸಂಬಂಧಿಸಿದ ಸಹಕಾರಿ ಕ್ರೆಡಿಟ್ ಬ್ಯಾಂಕಿನ ಪರ ವಕೀಲರು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಚಿಕ್ಕೋಡಿ ನ್ಯಾಯಾಲಯ ಪ್ರಕರಣ ವಜಾಗೊಳಿಸಿತ್ತು. ಆದರೆ ಹೈಕೋರ್ಟ್ ಸಂಚಾರಿ ಪೀಠ, ಚಿಕ್ಕೋಡಿ ನ್ಯಾಯಾಲಯದ ಆದೇಶ ಕಾನೂನು ಚೌಕಟ್ಟಿನಲ್ಲಿ ಇಲ್ಲ ಎಂದು ವಜಾ ಆದೇಶವನ್ನು ಅನೂರ್ಜಿತಗೊಳಿಸಿ ಪ್ರಕರಣದ ಮರು ವಿಚಾರಣೆಗೆ ಮಾಡಿ ಸೂಕ್ತ ನ್ಯಾಯ ನಿರ್ಣಯ ನೀಡಬೇಕು ಎಂದು ನಿರ್ದೇಶನ ನೀಡಿದೆ.