ವಿಜಯಸಾಕ್ಷಿ ಸುದ್ದಿ, ಗದಗ
ಶೇರ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಪ್ರತಿಷ್ಠಿತ ಗ್ರಾನೈಟ್ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ಗದಗನಲ್ಲಿ ನಡೆದಿದ್ದು, ವಂಚಿಸಿದ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಪ್ರತಿಷ್ಠಿತ ಗ್ರಾನೈಟ್ ಉದ್ಯಮಿ ಪ್ರಕಾಶ್ ಮಲ್ಲನಗೌಡರ ಪಾಟೀಲ್ ಎಂಬುವವರು ವಂಚನೆಗೊಳಗಾಗಿದ್ದಾರೆ.
ದಾವಣಗೆರೆ ಮೂಲದ ವಿನಯ್ ಯಲಿಗಾರ ಹಾಗೂ ಶಂಕರ್ ಯಲಿಗಾರ ಎಂಬುವರು ತಮ್ಮ ವಿವೈ ಕ್ಯಾಪಿಟಲ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ತಾವು ಕಟ್ಟಿದ ಹಣಕ್ಕೆ 4 ತಿಂಗಳಿಗೊಮ್ಮೆ ಶೇ.30 ರಷ್ಟು ಹಣ ಲಾಭ ಪಡೆಯಬಹುದೆಂದು ಉದ್ಯಮಿಗೆ ನಂಬಿಸಿದ್ದರು.
ಕಳೆದ ವರ್ಷ ಜೂ.28ರಂದು ಗದಗನ ಪಂಚಾಕ್ಷರಿ ನಗರದಲ್ಲಿರುವ ಉದ್ಯಮಿಯ ಸಹೋದರ ನಾಗರಾಜ್ ಪಾಟೀಲ್ ಮನೆಯಲ್ಲಿ ವ್ಯವಹಾರ ಕುದುರಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 35 ಲಕ್ಷ ರೂ. ಹಣ ಆರೋಪಿತರ ಕೈಗೆ ಕೊಟ್ಟಿದ್ದಾರೆ.
ಅಂದಿನಿಂದ ಇಂದಿನವರೆಗೂ ಒಂದು ನಯಾ ಪೈಸೆನೂ ಉದ್ಯಮಿಯ ಕೈಗೆ ಸಿಕ್ಕಿಲ್ಲ. ಬಳಿಕ ಇದೇ ರೀತಿ ಕೆಲವರಿಗೆ ವಂಚನೆ ಮಾಡಿರುವ ಆರೋಪದಡಿ ವಿನಯ್ ಯಲಿಗಾರ ಹಾಗೂ ಶಂಕರ್ ಯಲಿಗಾರ ಎಂಬ ಇಬ್ಬರು ಆರೋಪಿತರು ಬೆಂಗಳೂರಿನಲ್ಲಿ ಬಂಧನವಾಗಿದೆ.
ಸದ್ಯ ಉದ್ಯಮಿ ಪ್ರಕಾಶ್ ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ಸ್ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ. ಸದ್ಯ ಆರೋಪಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲು ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ.