ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದ ವಿವಾಹಿತ ಮಹಿಳೆಯೋರ್ವಳು ಮನೆಯಲ್ಲಿ ಯಾರು ಇಲ್ಲದ ವೇಳೆ ಬಟ್ಟೆ, ಚಿನ್ನಾಭರಣ ತೆಗೆದುಕೊಂಡು ನಾಪತ್ತೆಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಗುಂಡೇಗಾಲ ಗ್ರಾಮದ ಶಿವಕುಮಾರ್ ರವರ ಪತ್ನಿ ಸೌಂದರ್ಯ ಎಂಬ ಗೃಹಿಣಿಯೇ ನಾಪತ್ತೆಯಾಗಿದ್ದು, ಆಕೆಯ ಪತಿ ಶಿವಕುಮಾರ್, ಕೊಳ್ಳೇಗಾಲ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾನೆ.
ನಾಪತ್ತೆಯಾಗಿರುವ ಸೌಂದರ್ಯ ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪದ ಅಂತರಗಂಗೆ ಗ್ರಾಮದವರು. ಸೌಂದರ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಶಿವಕುಮಾರ್ ಸಹ ಬೆಂಗಳೂರಿನ ಮಾಲ್ನಲ್ಲಿ ಪ್ಯಾಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದನು.
ಇಬ್ಬರ ನಡುವೆ ಪರಿಚಯವಾಗಿ ತದನಂತರ ಪ್ರೇಮ ಬೆಳೆದಿದೆ. ಆನಂತರ ಕೊಳ್ಳೇಗಾಲಕ್ಕೆ ಬಂದು ಮದುವೆಯಾಗಿ ಹುಟ್ಟೂರಾದ ಗುಂಡೇಗಾಲದಲ್ಲಿ ಕಳೆದ ಒಂದು ವರ್ಷದಿಂದ ವೈವಾಹಿಕ ಜೀವನ ನಡೆಸುತ್ತಿದ್ದರು.
ಆದರೆ, ಜ.19 ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಸೌಂದರ್ಯ ತನ್ನ ಬಟ್ಟೆ, ಚಿನ್ನಾಭರಣ ತೆಗೆದುಕೊಂಡು ಕಾಣಿಯಾಗಿದ್ದಾಳೆ ಎಂದು ಆಕೆಯ ಪತಿ ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮೀಣ ಪೊಲೀಸರು ದೂರು ದಾಖಲಿಸಿಕೊಂಡು, ಮಹಿಳೆ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.