ವಿಜಯಸಾಕ್ಷಿ ಸುದ್ದಿ, ಗಂಗಾವತಿ:
ದನ ಕಾಯಲು ಕುರುಚಲು ಬೆಟ್ಟದ ಪ್ರದೇಶಕ್ಕೆ ತೆರಳಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ್ದರಿಂದ ಯುವಕ ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸಂಭವಿಸಿದೆ.
ಮೃತ ಯುವಕನನ್ನು ಕರಿಯಮ್ಮನಗಡ್ಡಿಯ ರಾಘವೇಂದ್ರ ವೆಂಕಟೇಶ (19) ಎಂದು ಗುರುತಿಸಲಾಗಿದೆ. ವಿರುಪಾಪುರ ಗಡ್ಡೆಯಲ್ಲಿ (ಋಷಿಮುಖ ಬೆಟ್ಟದ ಹಿಂದೆ ಹಾಗೂ ಗೋವನ್ ಕಾರ್ನರ್ ಹೊಟೇಲ್ ಮಧ್ಯ ಭಾಗದಲ್ಲಿ) ಈ ಘಟನೆ ನಡೆದಿದೆ.
ಚಿರತೆ ದಾಳಿಯ ಭೀತಿಯಿಂದಾಗಿ ಇತ್ತೀಚೆಗೆ ಬೆಟ್ಟದ ಪ್ರದೇಶಕ್ಕೆ ಯಾರೂ ಹೋಗುತ್ತಿರಲಿಲ್ಲ. ಆದರೆ, ಈ ಯುವಕ ಬೆಟ್ಟದ ಸಮೀಪ ಇರುವ ಕುರುಚಲ ಪ್ರದೇಶದಲ್ಲಿ ಗೋವುಗಳನ್ನು ಮೇಯಿಸಲು ಹೋದಾಗ ಈ ಘಟನೆ ನಡೆದಿದೆ.
ಚಿರತೆ ಯುವಕನ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಗೋವುಗಳು ಚಲ್ಲಾಪಿಲ್ಲಿಯಾಗಿ ಓಡಿ ತಪ್ಪಿಸಿಕೊಂಡಿವೆ. ಗೋವುಗಳು ಓಡುತ್ತಿರುವುದನ್ನು ದೂರದಿಂದ ಗಮನಿಸಿದ ಸ್ಥಳಿಯರು ಘಟನೆ ಸ್ಥಳಕ್ಕೆ ಬಂದಾಗಲೇ ಚಿರತೆ ದಾಳಿ ಮಾಡಿರುವುದು ಖಚಿತವಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈಚೆಗಷ್ಟೇ ಚಿರತೆ ಇಲ್ಲಿನ ದುರ್ಗಾದೇವಿ ದೇವಸ್ಥಾನದ ಪೂಜಾರಿಯನ್ನು ಹೊತ್ತೊಯ್ದು ತಿಂದು ಸಾಯಿಸಿತ್ತು. ಬಾಲಕನ ಮೇಲೂ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದ. ಇದೀಗ ಚಿರತೆ ಗಂಗಾವತಿ ತಾಲೂಕಿನಲ್ಲಿ ಎರಡನೇ ಬಲಿ ಪಡೆದಿದೆ.
ಚಿರತೆ ದಾಳಿಗೆ ಮತ್ತೊಬ್ಬ ಯುವಕ ಬಲಿ! ನರಭಕ್ಷಕ ಚಿರತೆ ಕಾಟಕ್ಕೆ ಬೆಚ್ಚಿ ಬಿದ್ದ ಜನ
Advertisement