ವಿಜಯಸಾಕ್ಷಿ ಸುದ್ದಿ, ಗದಗ:
ಟ್ರ್ಯಾಕ್ಟರ್ನಲ್ಲಿ ಶಾಲೆಗೆ ಹೊರಟಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನಿಯಂತ್ರಣ ಕಳೆದುಕೊಂಡು ಕೆಳಗೆ ಬಿದ್ದಿರುವ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಜರಗಿದೆ.
ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಸಹಳ್ಳಿ ಕ್ರಾಸ್ ಬಳಿ ನಡೆದ ಈ ದುರ್ಘಟನೆಯಲ್ಲಿ ಮೂಲತಃ ಕಡಕೋಳ ಗ್ರಾಮದ ಸುಧಾ (10) ಮೃತಪಟ್ಟ ದುರ್ಧೈವಿಯಾಗಿದ್ದಾಳೆ.
ತನ್ನ ಅಜ್ಜಿ ಮನೆ ಹೊಸಹಳ್ಳಿಯಲ್ಲಿದ್ದು ಕಡಕೋಳ ಗ್ರಾಮದ ಸರಕಾರಿ ಶಾಲೆಗೆ ಹೋಗಿ ಬರುತ್ತಿದ್ದ ಸುಧಾ ಶುಕ್ರವಾರ ಟ್ರ್ಯಾಕ್ಟರ್ನಲ್ಲಿ ಕಡಕೋಳಕ್ಕೆ ಶಾಲೆಗೆ ಹೊರಟಿದ್ದಳು. ಆದರೆ, ಹೊಸಹಳ್ಳಿ ಕ್ರಾಸ್ನಲ್ಲಿ ಅತೀ ವೇಗವಾಗಿ ಚಾಲಕ ಟ್ರ್ಯಾಕ್ಟರ್ನ್ನು ಚಲಾಯಿಸಿದ್ದರಿಂದ ಟ್ರೇಲರ್ನಲ್ಲಿ ನಿಂತಿದ್ದ ವಿದ್ಯಾರ್ಥಿನಿ ಸುಧಾ ಆಯ ತಪ್ಪಿ ಕೆಳಗೆ ಬಿದ್ದಿದ್ದು, ಹಿಂದಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ಚಾಲಕನ ಅಜಾಗರೂಕತೆಯಿಂದ ಟ್ರ್ಯಾಕ್ಟರ ಚಾಲನೆ ಮಾಡಿದ್ದೇ ಈ ಘಟನೆಗೆ ಕಾರಣ ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಿವಾನಂದ ಪಟ್ಟಣಶೆಟ್ಟಿ, ಇನ್ಸ್ಪೆಕ್ಟರ್ ವಿಕಾಸ ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಸ್ಐ ನವೀನ ಜಕ್ಕಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.