-ನಿರ್ದೇಶಕ ಸ್ವಾತಿ ಅಂಬರೀಶ್ ಅವರ ಮೂರನೇ ಸಿನಿಮಾ
-ಕಾಸ್ಟಿಂಗ್ ಕೌಚ್ ಅವರ ವರ್ತನೆ ಮೇಲೆ ಅವಲಂಬನೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ವಿಜಯಲಕ್ಷ್ಮಿ ಮಂಜುನಾಥರಡ್ಡಿ ಅವರು ಬರೆದ ದೇವದಾಸಿಯರು ಕೃತಿಯನ್ನು ತೆರೆಗೆ ತರಲು ಸಿದ್ಧತೆ ನಡೆದಿದೆ. ಈಗಾಗಲೇ ಸಿನಿಮಾದ ಶೂಟಿಂಗ್ ಮುಗಿದಿದ್ದು, ಡಿಸೆಂಬರ್ ಕೊನೆ ವೇಳೆಗೆ ತೆರೆಗೆ ತರಲು ಯೋಜಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಸ್ವಾತಿ ಅಂಬರೀಶ್ ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದಿಂದ ಚಿತ್ರದ ಚಿತ್ರೀಕರಣ ಮಾಡಲಾಗಿದ್ದು ಮಾರ್ಚ್-ಏಪ್ರಿಲ್ ವೇಳೆಗೆ ತೆರೆಗೆ ತರಬೇಕೆನ್ನುವಷ್ಟರಲ್ಲಿ ಕೊರೋನಾದಿಂದ ಲಾಕ್‌ಡೌನ್ ಶುರುವಾಗಿ ಬಿಡುಗಡೆಗೆ ತೊಂದರೆ ಆಯಿತು ಎಂದರು.
ಕೊಪ್ಪಳ ಸುತ್ತಮುತ್ತ ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಲಾಗಿತ್ತು. ಪರವಾನಗಿ ಸಿಗಲಿಲ್ಲವಾದ್ದರಿಂದ ಜಿಲ್ಲೆಯ ಹುಲಗಿ ಮತ್ತಿತರೆಡೆ ಚಿತ್ರೀಕರಣ ಮಾಡಲಾಗಲಿಲ್ಲ. ಚಿತ್ರದಲ್ಲಿ ಉತ್ತರ ಕರ್ನಾಟಕದ ಕಲಾವಿದರೂ ಸಹ ಅಭಿನಯಿಸಿದ್ದು ಈ ಭಾಗದ ಜನರು ನಮ್ಮ ತಂಡವನ್ನು ಹರಸಿ, ಆಶೀರ್ವದಿಸಬೇಕು ಎಂದು ಕೋರಿದರು.
ನಮ್ಮ ಈ ಸಿನಿಮಾದಲ್ಲಿ ಮೂರು ಹಾಡುಗಳಿದ್ದು ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಸಿನಿಮಾದ ಇಡೀ ತಿರುಳು ಮಧ್ಯಂತರದ ನಂತರ ಇದೆ. ಮೊದಲಾರ್ಧ ಕಥೆಯ ಹಿನ್ನೆಲೆಗೆ ಸೀಮಿತವಾಗಿರುತ್ತೆ. ಡಿಸೆಂಬರ್ ಕೊನೆಗೆ ರಾಜ್ಯದ ಸುಮಾರು 80 ಥೇಟರ್‌ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವ ಪ್ಲ್ಯಾನ್ ಇದೆ ಎಂದು ಅವರು ತಿಳಿಸಿದರು.
ಚಿತ್ರದ ನಾಯಕಿ ಸಂಜನಾ ನಾಯ್ಡು ಮಾತನಾಡಿ, ಚಿತ್ರದಲ್ಲಿ ಸಮಾಜಕ್ಕೆ ಒಂದೊಳ್ಳೆ ಸಂದೇಶ ಇದೆ. ಚಿತ್ರದಲ್ಲಿ ನನ್ನದು ದೇವದಾಸಿ ಪಾತ್ರ. ದೇವದಾಸಿಯರ ಸಮಸ್ಯೆ, ಬದುಕು-ಸಂಕಷ್ಟ ಕುರಿತು ಅನೇಕ ಸಿನಿಮಾಗಳು ಬಂದಿದ್ದು, ಅವುಗಳಿಗಿಂತ ನಮ್ಮ ಸಿನಿಮಾ ವಿಭಿನ್ನವಾಗಿದೆ ಎಂದು ತಿಳಿಸಿದರು.
ಚಿತ್ರರಂಗದಲ್ಲಿ ಡ್ರಗ್ಸ್ ಬಳಕೆ ಕುರಿತು ಚರ್ಚೆಯಾಗುತ್ತಿದೆ. ಯಾರೊ ಒಂದಿಬ್ಬರು ಅದರಲ್ಲಿ ಭಾಗಿಯಾಗಿದ್ದಾರೆ ಎಂದ ಮಾತ್ರಕ್ಕೆ ಎಲ್ಲರನ್ನೂ ಅನುಮಾನದಿಂದ ನೋಡಬಾರದು. ಕಾಸ್ಟಿಂಗ್ ಕೌಚ್ ಅವರವರ ವರ್ತನೆ ಮೇಲೆ ಅವಲಂಬನೆ ಆಗಿರುತ್ತೆ. ಇಷ್ಟು ವರ್ಷದ ಚಿತ್ರ ಬದುಕಿನಲ್ಲಿ ನನಗೆ ಅಂಥ ಅನುಭವ ಆಗಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ ಹೇಮಾ ಇದ್ದರು.