ವಿಜಯಸಾಕ್ಷಿ ಸುದ್ದಿ, ಹಾವೇರಿ
ಲವ್ ಜಿಹಾದ್ ಕಾಯ್ದೆ ದೇಶದಲ್ಲಿ ಬರಲೇಬೇಕು. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ಈ ಬಗ್ಗೆ ಚಿಂತನೆ ಮಾಡಿ ಕಾಯ್ದೆ ಜಾರಿಗೊಳಿಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಹಾವೇರಿಯಲ್ಲಿ ಗುರುವಾರ ಮಾತನಾಡಿದ ಅವರು,
ವಿಧಾನ ಪರಿಷತ್ ರದ್ದು ಮಾಡುವುದು ದೊಡ್ಡ ವಿಷಯವಲ್ಲ. ಪರಿಷತ್ತಿನಲ್ಲಿ ಮೊನ್ನೆ ನಡೆದ ಘಟನೆ ಅಮಾನವೀಯ. ಅದು ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಮತ್ತು ಗೂಂಡಾಗಿರಿ ತೋರಿಸುತ್ತದೆ ಎಂದು ಲೇವಡಿ ಮಾಡಿದರು.
ಒಬ್ಬ ಉಪಸಭಾಪತಿಯನ್ನೇ ಎಳೆದು ಹಾಕ್ತಾರಂದ್ರೆ ಅವರು ಆ ಸ್ಥಾನಕ್ಕೆ ಚ್ಯುತಿ ತಂದಿದ್ದಾರೆ. ಈ ಕುರಿತು ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ. ರಾಜ್ಯಪಾಲರು ದೂರಿನ ಮೇರೆಗೆ ಏನು ಕ್ರಮ ಕೈಗೊಳ್ಳುತ್ತಾರೆ ಅದರ ಮೇಲೆ ಮುಂದಿನ ಯೋಜನೆ ರೂಪಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮಾಜಿ ಸಿಎಂ ಕುಮಾರಸ್ವಾಮಿಗೆ ಪ್ರಧಾನಿ ಮೋದಿ ಜನ್ಮದಿನದ ಶುಭಾಶಯ ಕೋರಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಿಸಿಪಿ, ಅದು ಪ್ರಧಾನಿ ನರೇಂದ್ರ ಮೋದಿಯವರ ದೊಡ್ಡತನ. ಜನ್ಮದಿನದ ದಿನ ಶುಭಾಶಯ ಕೋರುವುದು ಮಾನವೀಯತೆ.
ರಾಜಕೀಯ ವೈರಿಗಳಾಗಿ ಇರುತ್ತೇವೆ. ಆದರೆ ಮದುವೆ, ಜನ್ಮದಿನದ ಸಮಯದಲ್ಲಿ ಶುಭಾಶಯ ಕೋರುವುದರಲ್ಲಿ ತಪ್ಪೇನಿದೆ ಎಂದ ಅವರು, ನಾನೂ ಸಹ ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳುತ್ತೇನೆ ಎಂದು ಶುಭಾಶಯ ಕೋರಿದರು.
ಜೆಡಿಎಸ್ ಪಕ್ಷ ಮಿಠಾಯಿ ಕೊಟ್ಟವರ ಬಳಿ ಹೋಗುತ್ತೆ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ವಿಚಾರ. ಅವರು ಅದೇ ಪಕ್ಷದವರಾಗಿದ್ದವರು. ಹಾಗಾಗಿ ಆ ರೀತಿ ಮಾತನಾಡುವುದು ಸರಿಯಲ್ಲ. ಗ್ರಾ.ಪಂ.ಚುನಾವಣೆಯ ಬಳಿಕ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಸಿಎಂ ಮತ್ತು ಪಕ್ಷದ ವರಿಷ್ಠರು ಕ್ರಮಕೈಗೊಳ್ಳುತ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.