ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗದಗ ಬೆಟಗೇರಿ ನಗರಸಭೆ ಚುನಾವಣೆಗೆ ಹಿಡಿದಿದ್ದ ಗ್ರಹಣ ಬಹುತೇಕ ಸರಿದಿದ್ದು, 2018ರಲ್ಲಿ ಪ್ರಕಟಗೊಂಡ ವಾರ್ಡ್‌ವಾರು ಮೀಸಲಾತಿ ಅನ್ವಯವೇ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.
ನಗರಸಭೆ 35 ವಾರ್ಡ್‌ಗಳ ವಾರ್ಡ್‌ವಾರು ಮೀಸಲಾತಿ ಅವೈಜ್ಞಾನಿಕವಾಗಿದೆ. ಕೇವಲ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ ಎಂದು ಆರೋಪಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. 16 ತಿಂಗಳ ವಿಚಾರಣೆ ನಂತರ ಹೈಕೋರ್ಟ್ ಮೊರೆ ಹೋದವರು ತಮ್ಮ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ. ಹೀಗಾಗಿ ಹೈಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಿದೆ.
ಈ ಹಿನ್ನೆಲೆಯಲ್ಲಿ 30-07-2018 ರಂದು ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಗಳು ಹೊರಡಿಸಿದ ವಾರ್ಡ್‌ವಾರು ಮೀಸಲಾತಿ ಅನ್ವಯ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಅಲ್ಲದೇ ರಾಜ್ಯ ಚುನಾವಣೆ ಆಯೋಗ ವಾರ್ಡ್‌ವಾರು ಮತದಾರರ ಪಟ್ಟಿಯನ್ನು ತಯಾರಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದು ಶೀಘ್ರವೇ ಚುನಾವಣೆ ನಡೆಯುವುದು ಖಾತ್ರಿಯಾದಂತಾಗಿದೆ.
ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೆ ನಗರಸಭೆ ವಾರ್ಡ್‌ವಾರು ಮತದಾರರ ಪಟ್ಟಿ ತಯಾರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೆ. 29ರಂದು ರಾಜ್ಯ ಚುನಾವಣೆ ಆಯೋಗ ಪತ್ರ ಬರೆದಿದೆ.
ನ.5ರೊಳಗೆ ವಾರ್ಡ್‌ವಾರು ಮತದಾರರ ಪಟ್ಟಿ ಅಂತಿಮವಾಗಬೇಕು. ಚುನಾವಣೆ ಆಯೋಗದಿಂದ ಯಾವುದೇ ಸಮಯದಲ್ಲೂ ಚುನಾವಣೆ ಘೋಷಿಸಬಹುದು. ನಗರದಲ್ಲಿ ಮೂಲಭೂತ ಸೌಕರ್ಯಗಳಿಂದ ಜನತೆ ವಂಚಿತರಾಗಿದ್ದಾರೆ. ಜನರ ಯಾವುದೇ ಸಮಸ್ಯೆಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಚುನಾವಣೆ ಶೀಘ್ರ ಘೋಷಣೆಯಾದರೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ನಾನು ಕೂಡ ಆಕಾಂಕ್ಷಿಯಾಗಿದ್ದೇನೆ. ಸ್ಥಳೀಯರ ಜೊತೆ ಚರ್ಚಿಸಿ ಚುನಾವಣೆಗೆ ಸ್ಪರ್ಧಿಸಲು ತೀರ್ಮಾನ ಕೈಗೊಳ್ಳುವೆ.
-ಮಂಜು ಮುಳಗುಂದ, ನಗರಸಭಾ ಮಾಜಿ ಸದಸ್ಯ, ಗದಗ
ಮೀಸಲಾತಿ ಪ್ರಕಟ: ಚುನಾವಣೆಗೆ ಮುನ್ನವೇ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕಟವಾಗಿರುವುದರಿಂದ ಮೀಸಲಾತಿ ಅಡಿಯಲ್ಲಿ ಬರುವ ಆಕಾಂಕ್ಷಿಗಳು ಚುನಾವಣೆಗೆ ನಿಲ್ಲಲು ಹಾತೊರೆಯುವಂತಾಗಿದೆ.
ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಒಂದೆಡೆಯಾದರೆ, ಅನೇಕ ವರ್ಷಗಳಿಂದ ನಗರಸಭೆಯ ಆಡಳಿತದ ಭಾಗವಾಗಿದ್ದ ಮಾಜಿ ಸದಸ್ಯರಿಗೆ ತೀವ್ರ ನಿರಾಸೆ ಮೂಡಿಸಿದೆ.
ನಗರಸಭೆ ವಶಕ್ಕೆ ಯತ್ನ
ಅಖಂಡ ಧಾರವಾಡ ಜಿಲ್ಲೆಯಿಂದ ಬೇರ್ಪಟ್ಟ ನಂತರವೂ ಗದಗ ಬೆಟಗೇರಿ ನಗರಸಭೆ ಅನೇಕ ವರ್ಷಗಳ ಕಾಲ ಕಾಂಗ್ರೆಸ್ ವಶದಲ್ಲಿಯೆ ಇದೆ. ಸದ್ಯ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿರುವುದು ಜಿಲ್ಲೆಯ ಮೂವರು ಶಾಸಕರು, ಸಂಸದರು ಬಿಜೆಪಿಯಿಂದ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಈ ಬಾರಿ ನಗರಸಭೆಯಲ್ಲಿ ಕಮಲ ಅರಳಿಸಲು ಬಿಜೆಪಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಮುಖ ಮುಖಂಡರು ತೆರೆ ಮರೆಯಲ್ಲಿ ನಗರಸಭೆ ವಶಕ್ಕೆ ಯೋಜನೆ ರೂಪಿಸಿದ್ದಾರೆ. ಇತ್ತ ಜಿಲ್ಲೆಯಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಲ್ಲಿ ಕಾಂಗ್ರೆಸ್ ಸಹ ನಗರಸಭೆಯನ್ನು ತನ್ನ ವಶದಲ್ಲಿಯೇ ಇಟ್ಟುಕೊಳ್ಳಲು ಮುಂದಾಗಿದ್ದು, ಕಾಂಗ್ರೆಸ್ ನಾಯಕರು ಸಹ ಬಿರುಸಿನ ಚಟುವಟಿಕೆ ಆರಂಭಿಸಿದ್ದಾರೆ.